ನೆರೆ ಪರಿಹಾರಕ್ಕೆ ಆಗ್ರಹಿಸಿ ಕರವೇ ಕಾರ್ಯಕರ್ತರಿಂದ ಉಪವಾಸ ಸತ್ಯಾಗ್ರಹ
ಹಣ ಬಿಡುಗಡೆ ಮಾಡದಿದ್ದರೆ ಕೇಂದ್ರದ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ: ನಾರಾಯಣಗೌಡ

ಬೆಂಗಳೂರು, ಅ.2: ರಾಜ್ಯದ ನೆರೆ ಸಂತ್ರಸ್ತರ ಪರಿಹಾರಕ್ಕೆ ಸ್ಪಂದಿಸದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಿದರು.
ನೆರೆ ಸಂತ್ರಸ್ಥರ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ ಸರಕಾರದ ನಿಲುವನ್ನು ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ಖಂಡಿಸಿದರು. ರಾಜ್ಯದ ಉತ್ತರ ಕರ್ನಾಟಕ, ಹೈ-ಕ ಭಾಗದಲ್ಲಿ ನೆರೆ ಬಂದು ಲಕ್ಷಾಂತರ ಮಂದಿ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ, ಲಕ್ಷಾಂತರ ಎಕರೆ ಜಮೀನು ನಾಶವಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ಕೇಂದ್ರ ಸರಕಾರ ಬಾರದಿರುವುದನ್ನು ಪ್ರತಿಭಟನಾಕಾರರು ವಿರೋಧಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ನಾರಾಯಣಗೌಡ ಅವರು, ರಾಜ್ಯದ ನೆರೆ ಸಂತ್ರಸ್ಥರ ಸಂಕಷ್ಟಕ್ಕೆ ಧಾವಿಸದೆ ಕೇಂದ್ರ ಸರಕಾರ ತಾರತಮ್ಯ ವಿರೋಧಿ ನೀತಿ ಅನುಸರಿಸುತ್ತಿದೆ. ಪ್ರವಾಹ ಬಂದು ತಿಂಗಳು ಕಳೆದರೂ ನಯಾಪೈಸೆ ಕೂಡ ಕೇಂದ್ರ ಸರಕಾರ ಬಿಡುಗಡೆ ಮಾಡಿಲ್ಲ ಎಂದು ದೂರಿದರು. ರಾಜ್ಯದಲ್ಲಿ ಕೇಂದ್ರ ಸಚಿವ ಅಮಿತ್ ಶಾ, ವೈಮಾನಿಕ ಸಮೀಕ್ಷೆ ನಡೆಸಿ, ಜನರ ಸಂಕಷ್ಟವನ್ನು ಕಂಡಿದ್ದಾರೆ. ಆದರೂ, ಪ್ರಧಾನಿಗಳ ಗಮನ ಸೆಳೆದು ಪರಿಹಾರ ಹಣ ಬಿಡುಗಡೆ ಮಾಡಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಿಂದ 25 ಮಂದಿ ಸಂಸದರು, ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಅವರದೇ ಪಕ್ಷದ ಪ್ರಧಾನಿಯಿಂದ ನೆರೆ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿಸುವಲ್ಲಿ ವಿಫಲರಾಗಿ ದುರ್ಬಲರೆನಿಸಿಕೊಂಡಿದ್ದಾರೆ ಎಂದು ಹರಿಹಾಯ್ದರು. ನೆರೆ ಪರಿಹಾರ ಕಾರ್ಯಗಳಿಗೆ ಹಣ ಬಿಡುಗಡೆ ಮಾಡದಿದ್ದರೆ ಕೇಂದ್ರ ಸರಕಾರದ ವಿರುದ್ಧ ರಾಜ್ಯ ವ್ಯಾಪ್ತಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
.jpg)