ನೆಕ್ಕಿಲಾಡಿಯಲ್ಲಿ ಕಡತ ತಿದ್ದುವ ಮೂಲಕ ಸಾಕ್ಷ್ಯ ನಾಶ ಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ- ಜೆಡಿಎಸ್ ಕಾರ್ಯಾಧ್ಯಕ್ಷ
ಕುಡಿಯುವ ನೀರಿನ ಬಿಲ್ ನಲ್ಲಿ ಅವ್ಯವಹಾರ
ಉಪ್ಪಿನಂಗಡಿ: ಪುತ್ತೂರು ತಾಲೂಕಿನ 34 ನೆಕ್ಕಿಲಾಡಿ ಗ್ರಾ.ಪಂ. ನಲ್ಲಿ ಲಕ್ಷಾಂತರ ರೂಪಾಯಿ ಕುಡಿಯುವ ನೀರಿನ ಬಿಲ್ ಬಾಕಿ ಇದೆ ಎಂಬ ಮಾಹಿತಿ ಹೊರಬಂದಿದ್ದು, ಇದರಲ್ಲಿ ಸಾಕಷ್ಟು ಅವ್ಯವಾಹರ ನಡೆದಿರಬಹುದಾದ ಸಾಧ್ಯತೆ ಇರುವುದರಿಂದ ಈ ಬಗ್ಗೆ ಎಸಿಬಿ ಅಥವಾ ಲೋಕಾಯುಕ್ತಕ್ಕೆ ದೂರು ನೀಡುವ ಚಿಂತನೆ ನಡೆದಿದೆ.
ಆದರೆ ಈ ನಡುವೆ ಈ ಹಿಂದಿನ ಕಾರ್ಯದರ್ಶಿ ರಾತ್ರಿ ವೇಳೆ ಗ್ರಾ.ಪಂ.ಗೆ ಬಂದು ಕಡತ ತಿದ್ದುವ ಮೂಲಕ ಸಾಕ್ಷ್ಯ ನಾಶ ಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಪುತ್ತೂರು ವಿಧಾನಸಭಾ ಕಾರ್ಯಾಧ್ಯಕ್ಷ ಅಬ್ದುಲ್ ರಹಿಮಾನ್ ಯುನಿಕ್ ಆರೋಪಿಸಿದ್ದಾರೆ.
34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ನಲ್ಲಿ ಲಕ್ಷಾಂತರ ರೂ. ಕುಡಿಯುವ ನೀರಿನ ಬಿಲ್ ವಸೂಲಾತಿಗೆ ಬಾಕಿ ಇದೆಯೆಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಇತ್ತೀಚೆಗೆ ಸದಸ್ಯರ ಸಾಮಾನ್ಯ ಸಭೆಯ ಮುಂದೆ ತಂದಿದ್ದರು. ಈ ಬಗ್ಗೆ ಸದಸ್ಯರು ಸಮಗ್ರ ವರದಿ ನೀಡಲು ಸೂಚಿಸಿದ್ದರು.
ಇಲ್ಲಿ ಅವ್ಯವಹಾರದ ವಾಸನೆ ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಸಮಗ್ರ ದಾಖಲೆ ಸಂಗ್ರಹಿಸಿ ಎಸಿಬಿ ಅಥವಾ ಲೋಕಾಯುಕ್ತಕ್ಕೆ ದೂರು ನೀಡುವ ಚಿಂತನೆ ಜೆಡಿಎಸ್ ನಡೆಸಿತ್ತು. ಇದು ಪತ್ರಿಕಾ ಮಾಧ್ಯಮಗಳಲ್ಲಿ ಬಹಿರಂಗವೂ ಅಗಿತ್ತು. ಇಲ್ಲಿ ಅವ್ಯವಹಾರ ನಡೆದಿದ್ದು 2018-19ರ ಅವಧಿಯಲ್ಲಿ ಆದರೆ ಲೋಕಾಯುಕ್ತ ಅಥವಾ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಕ್ಕೆ ದೂರು ನೀಡುವ ವಿಚಾರ ಬೆಳಕಿಗೆ ಬಂದ ಬಳಿಕ ಆಗ ಕಾರ್ಯದರ್ಶಿ ಯಾಗಿ ವರ್ಗಾವಣೆಗೊಂಡು ಹೋಗಿದ್ದ ಈ ಅವ್ಯವಾಹರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ಚಂದ್ರಾವತಿಯವರನ್ನು ತುರಾತುರಿಯಲ್ಲಿ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಯನ್ನಾಗಿ ಪ್ರಭಾರವಾಗಿ ನಿಯೋಜಿಸಲಾಗಿತ್ತು. ಆದರೆ ಇನ್ನೂ ಕರ್ತವ್ಯದ ರಿಪೋರ್ಟ್ ಮಾಡದ ಅವರು ಅಕ್ಟೋಬರ್ 1 ರಂದು ಸಂಜೆ ಪಂಚಾಯತ್ನ ಕಚೇರಿ ಅವಧಿ ಮುಗಿಯುವ ಸಮಯವಾದ 5:30 ರ ಬಳಿಕ ಬಂದು ರಾತ್ರಿ ತನಕ ಗ್ರಾ.ಪಂ.ನ ಕುಡಿಯುವ ನೀರಿನ ಬಿಲ್ ವಸೂಲಿಗಾರ ಹಾಗೂ ಗ್ರಾ.ಪಂ. ಸದಸ್ಯನೋರ್ವನ ಒಟ್ಟಿಗೆ ಇದ್ದು ಗ್ರಾ.ಪಂ.ನಲ್ಲಿ ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.
ಗ್ರಾ.ಪಂ.ಗೆ ಕರ್ತವ್ಯದ ವರದಿ ಮಾಡದೇ ಏಕಾಏಕಿ ಗ್ರಾ.ಪಂ.ನ ಕಚೇರಿ ಅವಧಿ ಮುಗಿದ ಬಳಿಕ ಅವರು ಬಂದು ರಾತ್ರಿ ತನಕ ಕಡತ ಪರಿಶೀಲಿಸಿದ್ದು ಅವರು ಸಾಕ್ಷ್ಯ ನಾಶ ಪಡಿಸುತ್ತಿದ್ದಾರೆ ಎಂಬ ಸಂಶಯ ನಮಗೆ ಎದುರಾಗಿದೆ. ಗ್ರಾ.ಪಂ. ಸದಸ್ಯನೋರ್ವನೂ ಈ ಸಂದರ್ಭ ಅಲ್ಲಿದ್ದು ಆತನೂ ಈ ಅಕ್ರಮದಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಸಂಶಯ ಈಗ ಎದುರಾಗಿದೆ. ಅಲ್ಲದೇ ಅವ್ಯವಹಾರ ದ ಮಾಹಿತಿ ಸಿಕ್ಕಿದ ತಕ್ಷಣ ತರಾತುರಿಯಲ್ಲಿ ಈ ಹಿಂದಿನ ಕಾರ್ಯದರ್ಶಿ ಯವರಾದ ಚಂದ್ರಾವತಿಯನ್ನು ಇಲ್ಲಿಗೆ ನಿಯೋಜನೆಗೊಳಿಸಿರುವ ಮೇಲಾಧಿಕಾರಿಗಳೂ ಅವ್ಯಹಾರದ ಪಾಲು ಪಡೆದಿದ್ದಾರೆಯೇ ಎಂಬ ಸಂಶಯ ಸಾರ್ವಜನಿಕರದ್ದಾಗಿದೆ. ಅಲ್ಲಿನ ಅಕ್ರಮದ ಬಗ್ಗೆ ದಾಖಲೆಯನ್ನು ಮಾಹಿತಿ ಹಕ್ಕಿನಲ್ಲಿ ಕೇಳಲಾಗಿದ್ದು ಅದರ ಮೊದಲೇ ಸಾಕ್ಷ್ಯ ನಾಶ ಪಡಿಸಲಾಗುತ್ತಿದೆಯೋ ಎಂಬ ಅನುಮಾನ ವ್ಯಕ್ತವಾಗಿದ್ದು, ಕಚೇರಿ ಅವಧಿ ಮುಗಿದ ಬಳಿಕ ಗ್ರಾ.ಪಂ. ಕಡತಗಳನ್ನು ತಿದ್ದುವ ಕೆಲಸ ನಡೆಸಿದರೆ ಗ್ರಾಮಸ್ಥರನ್ನು ಸೇರಿಸಿಕೊಂಡು ರಾತ್ರಿ ವೇಳೆ ಬಂದು ಕಡತ ತಿದ್ದುವ ಭ್ರಷ್ಟರನ್ನು ಒಳಗಿರಿಸಿ ಬೀಗ ಜಡಿದು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಅಬ್ದುರ್ರಹ್ಮಾನ್ ಯುನಿಕ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







