ದಕ್ಷಿಣ ಆಫ್ರಿಕಾದ ಪರ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ ಭಾರತ ಮೂಲದ ಮುತ್ತುಸ್ವಾಮಿ

ವಿಶಾಖಪಟ್ಟಣ, ಅ.2: ದಕ್ಷಿಣ ಆಫ್ರಿಕಾದ ಪರ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಡಬೇಕೆಂಬ ಆಲ್‌ರೌಂಡರ್ ಸೇನುರಾನ್ ಮುತ್ತುಸ್ವಾಮಿ ಕನಸು ಬುಧವಾರ ನೆರವೇರಿತು. ಭಾರತ ಮೂಲದ ಮುತ್ತುಸ್ವಾಮಿ ಭಾರತದ ವಿರುದ್ಧವೇ ಚೊಚ್ಚಲ ಪಂದ್ಯ ಆಡುವ ಅಪೂರ್ವ ಅವಕಾಶವನ್ನು ಪಡೆದರು.
ಹಲವಾರು ವರ್ಷಗಳ ಹಿಂದೆ ಮುತ್ತುಸ್ವಾಮಿ ಪೂರ್ವಜರು ತಮಿಳುನಾಡಿನಿಂದ ದಕ್ಷಿಣ ಆಫ್ರಿಕಾಕ್ಕೆ ವಲಸೆ ಹೋಗಿದ್ದರು. 25ರ ಹರೆಯದ ಡರ್ಬನ್ ಆಟಗಾರ ಮುತ್ತುಸ್ವಾಮಿ ಕಳೆದ ವರ್ಷ ದಕ್ಷಿಣ ಆಫ್ರಿಕಾ ‘ಎ’ ತಂಡದೊಂದಿಗೆ ಭಾರತಕ್ಕೆ ಆಗಮಿಸಿರುವ ಕಾರಣ ಭಾರತ ಅವರಿಗೆ ಪರಿಚಿತ ತಾಣವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿ, ಬೆಳೆದಿರುವ ಮುತ್ತುಸ್ವಾಮಿಗೆ ಸ್ವದೇಶದಲ್ಲಿ ದಕ್ಷಿಣ ಭಾರತದವರೆಂದರೆ ತುಂಬಾ ಇಷ್ಟಪಡುತ್ತಾರೆ. ‘‘ನಮ್ಮ ಕುಟುಂಬದ ಮೂಲ ಚೆನ್ನೈ. ಚೆನ್ನೈನಿಂದ 300 ಕಿ.ಮೀ.ದೂರದ ನಾಗಪಟ್ಟಣಂನಲ್ಲಿ ನಮ್ಮ ಕುಟುಂಬದವರಿದ್ದಾರೆ. ಹಲವು ತಲೆಮಾರುಗಳು ಕಳೆದರೂ ಭಾರತದ ಸಂಪರ್ಕ ಹಾಗೆಯೇ ಇದೆ. ನಮ್ಮದು ಭಾರತೀಯ ಸಂಸ್ಕೃತಿ. ದಕ್ಷಿಣ ಆಫ್ರಿಕಾ ತಂಡಕ್ಕೆ ನಾನು ಆಯ್ಕೆಯಾದಾಗ ನನ್ನ ಹೆತ್ತವರು ಬಹಳಷ್ಟು ಸಂತಸ ಪಟ್ಟಿದ್ದರು. ಭಾರತ ವಿರುದ್ಧ ಚೊಚ್ಚಲ ಪಂದ್ಯ ಆಡಿರುವುದು ತುಂಬಾ ವಿಶೇಷವಾದುದು. ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚು ಭಾರತೀಯರು ವಾಸವಿರುವ ಡರ್ಬನ್‌ನಲ್ಲಿ ನಾನು ಯಾವಾಗಲೂ ದೇವಸ್ಥಾನಕ್ಕೆ ಭೇಟಿ ನೀಡುವೆ. ನನ್ನ ಕುಟುಂಬದ ಕೆಲವರು ತಮಿಳು ಮಾತನಾಡುತ್ತಾರೆ. ಆದರೆ ನನಗೆ ಆ ಭಾಷೆ ಮಾತನಾಡಲು ಬರುವುದಿಲ್ಲ. ನಿಧಾನವಾಗಿ ಆ ಭಾಷೆ ಕಲಿಯಲು ಯತ್ನಿಸುತ್ತಿದ್ದೇನೆ’’ ಎಂದು ಮುತ್ತುಸ್ವಾಮಿ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿಶಾಖಪಟ್ಟಣದ ಶುಷ್ಕ ವಾತಾವರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಮುತ್ತುಸ್ವಾಮಿ ಅವರನ್ನು ಮೂರನೇ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಕಣಕ್ಕಿಳಿಸಲು ಯೋಜನೆ ರೂಪಿಸಿದೆ. ಮುತ್ತುಸ್ವಾಮಿ ಓರ್ವ ಉತ್ತಮ ಬ್ಯಾಟ್ಸ್ ಮನ್ ಆಗಿದ್ದು, ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 3,403 ರನ್ ಹಾಗೂ 129 ವಿಕೆಟ್‌ಗಳನ್ನು ಗಳಿಸಿದ್ದಾರೆ.





