ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಆಚಾರ್ಯ ವಿದ್ಯಾನಂದರು ಪ್ರೇರಣೆ : ಡಾ. ಹೆಗ್ಗಡೆ
ಮೂಡುಬಿದಿರೆಯಲ್ಲಿ ಆಚಾರ್ಯರಿಗೆ ಸ್ಮರಣಾಂಜಲಿ

ಮೂಡುಬಿದಿರೆ: ಆಧ್ಯಾತ್ಮ ಮಾತ್ರವಲ್ಲದೇ ಸಾಮಾಜಿಕ ಚಿಂತನೆಯನ್ನೂ ಸಮೀಕರಿಸಿ ಪ್ರೀತಿ, ಕಾಳಜಿಯೊಂದಿಗೆ ಜನಮನ ಮುಟ್ಟಿದವರು ರಾಷ್ಟ್ರಸಂತ ಶ್ವೇತ ಪಿಂಛಾಚಾರ್ಯ 108 ವಿದ್ಯಾನಂದ ಮುನಿಮಹಾರಾಜರು. ಗಾಂಧೀ ತತ್ವದಿಂದ ಪ್ರಭಾವಿತರಾಗಿದ್ದ ಅವರು ತಮ್ಮ ಜನಮಂಗಲ ಚಿಂತನೆಯ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೊಜನೆ ಮತ್ತು ಸ್ವಉದ್ಯೋಗ ಯೋಜನೆಗಳಿಗೆ ಮೂಲ ಪ್ರೇರಣೆಯಾಗಿದ್ದರು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನುಡಿದರು.
ಅವರು ಇತ್ತೀಚಿಗೆ ಸಲ್ಲೇಖನ ಪೂರ್ವಕ ಸಮಾಧಿ ಮರಣ ಹೊಂದಿದ ರಾಷ್ಟ್ರಸಂತ ಶ್ವೇತ ಪಿಂಛಾಚಾರ್ಯ 108 ವಿದ್ಯಾನಂದ ಮುನಿಮಹಾರಾಜರಿಗೆ ಅವಿಭಜಿತ ದಕ ಜಿಲ್ಲಾ ಜೈನ ಸಮಾಜದ ವತಿಯಿಂದ ಶ್ರೀಮಹಾವೀರ ಭವನದಲ್ಲಿ ನಡೆದ ಸ್ಮರಣಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಮ್ಮ ವರ್ಚಸ್ಸಿನಿಂದ ಎತ್ತರಕ್ಕೇರಿದ ಆಚಾರ್ಯರ ಸಮಾಧಿ ಮರಣಕ್ಕೆ ಇನ್ನೂ ಹೆಚ್ಚಿನ ಮಹತ್ವ, ಮನ್ನಣೆ ಸಿಗಬೇಕಾಗಿತ್ತು ಎಂದವರು ಅಭಿಪ್ರಾಯಪಟ್ಟರು.
ಮೂಡುಬಿದಿರೆ ಶ್ರೀ ಜೈನಮಠದ ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಆಚಾರ್ಯ ಮುನಿಮಹಾರಾಜರು ಶ್ರೇಷ್ಠ ವ್ಯಕ್ತಿತ್ವಗಳಿಗೆ ಪ್ರೇರಣೆಯಾದವರು. ಮೂಲತಃ ಕರ್ನಾಟಕದವರಾಗಿದ್ದರೂ ವಿಶ್ವವ್ಯಾಪಿಯಾಗಿ ಗುರುತಿಸಿಕೊಂಡ ಸಾಧಕರು. ಸಲ್ಲೇಖನದ ವೈಜ್ಞಾನಿಕ ಮಹತ್ವವನ್ನು ವರ್ತಮಾನದಲ್ಲಿ ಸಾಧಿಸಿ ತೋರಿದ ಮಹಾ ಸಂತ ಎಂದರು.
ಕಾರ್ಕಳದ ನ್ಯಾಯವಾದಿ ಎಂ.ಕೆ ವಿಜಯಕುಮಾರ್ , ಕೆ.ಜಯವರ್ಮ ಬಲ್ಲಾಳ್, ಡಾ.ಎಂ.ಎನ್ ರಾಜೇಂದ್ರ ಕುಮಾರ್, ಮಾಜಿ ಸಚಿವ, ಕೆ.ಅಮರನಾಥ ಶೆಟ್ಟಿ, ವಿ.ಕೆ ಜೈನ್ ಪುತ್ತೂರು, ಎಸ್.ಡಿ. ಸಂಪತ್ ಸಾಮ್ರಾಜ್ಯ. ಶಿವಪ್ರಸಾದ್ ಅಜಿಲ, ಪುಷ್ಪರಾಜ ಜೈನ್, ಸುದರ್ಶನ್ ಜೈನ್, ಲಾಲ್ ಗೋಯೆಲ್ ನುಡಿನಮನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಂಡಾರು ಗುಣಪಾಲ ಹೆಗ್ಡೆ ಸ್ವಾಗತಿಸಿದರು.
ಪ್ರಭಾತ್ ಕುಮಾರ್, ನೇಮಿರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







