ಗೆಲುವಿನ ಹಳಿಗೆ ಮರಳಿದ ಕರ್ನಾಟಕ
ವಿಜಯ ಹಝಾರೆ ಟ್ರೋಫಿ

►ಛತ್ತೀಸ್‌ಗಢ ವಿರುದ್ಧ 79 ರನ್ ಜಯ
►ಮನೀಷ್ ಪಾಂಡೆ ಶತಕ, ರಾಹುಲ್ ಅರ್ಧಶತಕ
ಬೆಂಗಳೂರು,ಅ.2: ನಾಯಕ ಮನೀಷ್ ಪಾಂಡೆ ಹಾಗೂ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಬ್ಯಾಟಿಂಗ್ ಸಾಹಸದಿಂದ ಆತಿಥೇಯ ಕರ್ನಾಟಕ ತಂಡ ಛತ್ತೀಸ್‌ಗಢ ವಿರುದ್ಧ ಬುಧವಾರ ನಡೆದ ವಿಜಯ ಹಝಾರೆ ಟ್ರೋಫಿಯ ಎಲೈಟ್ ಗ್ರೂಪ್ ‘ಎ’ ಪಂದ್ಯದಲ್ಲಿ 79 ರನ್‌ಗಳ ಅಂತರದಿಂದ ಜಯ ದಾಖಲಿಸಿದೆ. ನಾಲ್ಕು ಅಂಕವನ್ನು ಬಾಚಿಕೊಂಡಿತು.
ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಕರ್ನಾಟಕ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 285 ರನ್ ಗಳಿಸಿತು. ರಾಹುಲ್(81 ರನ್) ಹಾಗೂ ಪಾಂಡೆ(ಔಟಾಗದೆ 142)ಛತ್ತೀಸ್‌ಗಢ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಗೆಲ್ಲಲು ಕಠಿಣ ಗುರಿ ಚೇಸಿಂಗ್ ಮಾಡಿದ ಛತ್ತೀಸ್‌ಗಢ 44 ಓವರ್‌ಗಳಲ್ಲಿ 206 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ಕರ್ನಾಟಕ ತಂಡ ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್(8) ಹಾಗೂ ಕರುಣ್ ನಾಯರ್(1) ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಮೂರನೇ ವಿಕೆಟ್ ಜೊತೆಯಾಟದಲ್ಲಿ 150 ರನ್ ಸೇರಿಸಿದ ರಾಹುಲ್ ಹಾಗೂ ಮನೀಷ್ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಟೀಮ್ ಇಂಡಿಯಾದಿಂದ ಕಡೆಗಣಿಸಲ್ಪಟ್ಟಿರುವ ರಾಹುಲ್ 103 ಎಸೆತಗಳ ತಾಳ್ಮೆಯ ಇನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಆಯ್ಕೆಗಾರರ ಗಮನ ಸೆಳೆದರು. ಛತ್ತೀಸ್‌ಗಢದ ಪರ ವೇಗದ ಬೌಲರ್ ಪಂಕಜ್ ರಾವ್(2-60) ಹಾಗೂ ಶಶಾಂಕ್(2-66)ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ನಾಯಕ ಮನೀಷ್ ಪಾಂಡೆ ಕೇವಲ 118 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಸಹಿತ 142 ರನ್ ಗಳಿಸಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ತಲೆಕೆಡಿಸಿಕೊಳ್ಳದ ಪಾಂಡೆ ಕರ್ನಾಟಕದ ಮೊತ್ತವನ್ನು 280ರ ಗಡಿ ದಾಟಿಸಿದರು.
286 ರನ್ ಚೇಸಿಂಗ್‌ಗೆ ತೊಡಗಿದ ಛತ್ತೀಸ್‌ಗಢ ತಂಡಕ್ಕೆ ಕರ್ನಾಟಕದ ವೇಗದ ಬೌಲರ್‌ಗಳಾದ ಪ್ರಸಿದ್ಧ ಕೃಷ್ಣ(3-31) ಹಾಗೂ ರೋನಿತ್ ಮೋರೆ(2-52)ಆರಂಭದಲ್ಲೇ ಕಡಿವಾಣ ಹಾಕಿದರು. ಸ್ಪಿನ್ನರ್ ಶ್ರೇಯಸ್ ಗೋಪಾಲ್(3-53)ಛತ್ತೀಸ್‌ಗಢ ದಾಂಡಿಗರನ್ನು ಕಾಡಿದರು. ಛತ್ತೀಸ್‌ಗಢ ಪರ ಅಮನ್‌ದೀಪ್ ಖಾರೆ 62 ಎಸೆತಗಳಲ್ಲಿ 43 ರನ್ ಗಳಿಸಿ ಏಕಾಂಗಿ ಹೋರಾಟ ನೀಡಿದರು.
‘ಎ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಸೌರಾಷ್ಟ್ರ ತಂಡ ಆಂಧ್ರವನ್ನು 153 ರನ್‌ಗಳ ಅಂತರದಿಂದ ಸೋಲಿಸಿತು. ಸಮರ್ಥ್ ವ್ಯಾಸ್ ಹಾಗೂ ಜೈದೇವ್ ಉನದ್ಕಟ್ ಕ್ರಮವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದರು. 36 ಓವರ್‌ಗಳಿಗೆ ಸೀಮಿತಗೊಂಡ ಮತ್ತೊಂದು ಪಂದ್ಯದಲ್ಲಿ ಕೇರಳ ತಂಡವನ್ನು 5 ರನ್‌ನಿಂದ ರೋಚಕವಾಗಿ ಮಣಿಸಿದ ಜಾರ್ಖಂಡ್ ನಾಲ್ಕು ಅಂಕ ಬಾಚಿಕೊಂಡಿತು.







