ಮಹಿಳಾ ಟ್ವೆಂಟಿ-20 ಕ್ರಿಕೆಟ್: ನೂತನ ವಿಶ್ವ ದಾಖಲೆ ನಿರ್ಮಿಸಿದ ಹೀಲಿ

ಸಿಡ್ನಿ, ಅ.2: ನಾರ್ತ್ ಸಿಡ್ನಿ ಓವಲ್‌ನಲ್ಲಿ ಬುಧವಾರ ನಡೆದ ಮಹಿಳಾ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಆಸ್ಟ್ರೇಲಿಯದ ಅಲಿಸ್ಸಾ ಹೀಲಿ ನೂತನ ವಿಶ್ವ ದಾಖಲೆ ನಿರ್ಮಿಸಿದರು.
ಶ್ರೀಲಂಕಾ ವಿರುದ್ಧ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಹೀಲಿ ಕೇವಲ 61 ಎಸೆತಗಳಲ್ಲಿ ಔಟಾಗದೆ 148 ರನ್ ಗಳಿಸಿದರು. ಕೇವಲ 46 ಎಸೆತಗಳಲ್ಲಿ ಶತಕ ಪೂರೈಸಿದ ಹೀಲಿ ಟ್ವೆಂಟಿ-20 ಇತಿಹಾಸದಲ್ಲಿ ಎರಡನೇ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ್ತಿ ಎನಿಸಿಕೊಂಡರು.
29ರ ಹರೆಯದ ಆರಂಭಿಕ ಆಟಗಾರ್ತಿಯ ವಿಶ್ವ ದಾಖಲೆಯ ಸ್ಕೋರ್ ನೆರವಿನಿಂದ ಆಸ್ಟ್ರೇಲಿಯ 2 ವಿಕೆಟ್‌ಗಳ ನಷ್ಟಕ್ಕೆ 226 ರನ್ ಗಳಿಸಿತು. ಇನಿಂಗ್ಸ್ ನ 19ನೇ ಓವರ್‌ನಲ್ಲಿ ಸಿಕ್ಸರ್ ಸಿಡಿಸಿದ ಹೀಲಿ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಔಟಾಗದೆ 133 ರನ್ ಗಳಿಸಿದ್ದ ಸಹ ಆಟಗಾರ್ತಿ ಮೆಗ್ ಲ್ಯಾನ್ನಿಂಗ್ ದಾಖಲೆ(ಔಟಾಗದೆ 133)ಮುರಿದರು.
ಎರಡು ದಿನಗಳ ಹಿಂದೆ 100ನೇ ಟ್ವೆಂಟಿ-20 ಪಂದ್ಯವನ್ನು ಆಡಿದ್ದ ಹೀಲಿ ಶ್ರೀಲಂಕಾದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. 19 ಬೌಂಡರಿ ಹಾಗೂ ಏಳು ಸಿಕ್ಸರ್‌ಗಳನ್ನು ಸಿಡಿಸಿದರು.







