ಬಿಹಾರ ಮಳೆ: ಮೃತರ ಸಂಖ್ಯೆ 73ಕ್ಕೆ ಏರಿಕೆ
ಮತ್ತೆ ಭಾರೀ ಮಳೆಯ ಮುನ್ಸೂಚನೆ

ಪಾಟ್ನ, ಅ.3: ಬಿಹಾರದಲ್ಲಿ ಸುರಿಯತ್ತಿರುವ ಭಾರೀ ಮಳೆಯಿಂದ ರಾಜ್ಯದ ಬಹುತೇಕ ಎಲ್ಲಾ ನದಿಗಳ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ರಾಜ್ಯದಲ್ಲಿ ಮಳೆ ಮತ್ತು ಪ್ರವಾಹಕ್ಕೆ ಸಂಬಂಧಿಸಿದ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 73ಕ್ಕೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸುಮಾರು 15 ಜಿಲ್ಲೆಗಳು ನೆರೆನೀರಿನಲ್ಲಿ ಮುಳುಗಿದ್ದು ನೀರನ್ನು ಪಂಪ್ ಬಳಸಿ ಕಾಲಿ ಮಾಡಲಾಗುತ್ತಿದೆ ಎಂದು ವಿಪತ್ತು ನಿರ್ವಹಣಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರತ್ಯಾಯ ಅಮೃತ್ ಹೇಳಿದ್ದಾರೆ.
ಭಾಗಲ್‌ಪುರ ಜಿಲ್ಲೆಯಲ್ಲಿ ಗರಿಷ್ಟ ಹಾನಿಯಾಗಿದ್ದು ಕನಿಷ್ಟ 12 ಮಂದಿ ಮೃತಪಟ್ಟಿದ್ದಾರೆ. ಶಾಲೆ, ಸರಕಾರಿ ಕಚೇರಿ, ಬ್ಯಾಂಕ್, ಅಂಗಡಿ, ಖಾಸಗಿ ಆಸ್ಪತ್ರೆಗ ಕಾರ್ಯ ನಿರ್ವಹಣೆಗೆ ತೊಡಕಾಗಿದೆ.
ಈ ಮಧ್ಯೆ ಮುಂದಿನ 48 ಗಂಟೆಗಳಲ್ಲಿ ಪಾಟ್ನ, ವೈಶಾಲಿ, ನಳಂದ ಮತ್ತು ಗಯ ಸಹಿತ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿ ಆರೆಂಜ್ ಅಲರ್ಟ್ ಘೋಷಿಸಿದೆ. ಗರಿಷ್ಟ ಜಾಗರೂಕತೆ ವಹಿಸುವಂತೆ ಸ್ಥಳೀಯರಿಗೆ ಸೂಚಿಸಿದೆ. ಪಾಟ್ನದಲ್ಲಿ ಮನೆ ಹಾಗೂ ಕಚೇರಿಗಳು ಜಲಾವೃತಗೊಂಡಿದ್ದು ನೆರೆ ನೀರಿನಲ್ಲಿ ಸಿಲುಕಿರುವವರನ್ನು ರಕ್ಷಿಸಲು ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಿದೆ. ಪ್ರವಾಹ ಸಂತ್ರಸ್ತರಿಗೆ ವೈದ್ಯಕೀಯ ನೆರವು ಒದಗಿಲು 7 ತಂಡಗಳನ್ನು ರಚಿಸಲಾಗಿದೆ.







