ಮಹಾರಾಷ್ಟ್ರಕ್ಕೆ ಶೀಘ್ರ ಶಿವಸೇನೆಯ ಮುಖ್ಯಮಂತ್ರಿ: ಆದಿತ್ಯ ಠಾಕ್ರೆ

ಮುಂಬೈ,ಅ.3: ಶಿವಸೇನೆ ಅಧ್ಯಕ್ಷ ಉದ್ಧವ ಠಾಕ್ರೆ ಅವರ ಪುತ್ರ ಹಾಗೂ ಯುವಸೇನೆ ನಾಯಕ ಆದಿತ್ಯ ಠಾಕ್ರೆ ಅವರು ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ವರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಶಿವಸೇನೆ ಅಭ್ಯರ್ಥಿಯಾಗಿ ಬುಧವಾರ ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತನ್ನ ನಾಮಪತ್ರವನ್ನು ಸಲ್ಲಿಸಿದರು. ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಠಾಕ್ರೆ ಕುಟುಂಬದ ಮೊದಲ ಸದಸ್ಯರಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ ಶೀಘ್ರವೇ ಶಿವಸೇನೆಯ ಮುಖ್ಯಮಂತ್ರಿಯನ್ನು ನಾವು ಕಾಣಲಿದ್ದೇವೆ. ಸದ್ಯಕ್ಕೆ ಜನರ ನಿರೀಕ್ಷೆಯಂತೆ ನಾನು ರಾಜ್ಯಕ್ಕೆ ಸೇವೆ ಸಲ್ಲಿಸುತ್ತೇನೆ ’ಎಂದರು. ಶಿವಸೇನೆಯು ಆದಿತ್ಯರನ್ನು ಮುಖ್ಯಮಂತ್ರಿ ಹುದ್ದೆಗೆ ತನ್ನ ಅಭ್ಯರ್ಥಿಯಾಗಿ ಬಿಂಬಿಸುತ್ತಿದ್ದರೆ ಬಿಜೆಪಿಯು ಹಾಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನೇ ಮುಂದುವರಿಸುವ ದೃಢ ನಿಲುವನ್ನು ಹೊಂದಿದೆ.
ಆದಿತ್ಯ ನಾಮಪತ್ರ ಸಲ್ಲಿಕೆ ಪ್ರಯುಕ್ತ ಶಿವಸೇನೆಯು ಬೃಹತ್ ರ್ಯಾಲಿಯನ್ನು ಆಯೋಜಿಸಿದ್ದು,ಕೇಸರಿಮಯವಾಗಿದ್ದ ರಸ್ತೆಗಳಲ್ಲಿ ಪಕ್ಷದ ಕಾರ್ಯಕರ್ತರ ಬೃಹತ್ ಗುಂಪುಗಳು ಡ್ಯಾನ್ಸ್ ಮಾಡುತ್ತ ಸಾಗುತ್ತಿದ್ದವು. ತೆರೆದ ಜೀಪಿನಲ್ಲಿ ಸಾಗುತ್ತಿದ್ದ ಆದಿತ್ಯರ ಮೇಲೆ ಜನರು,ಅಭಿಮಾನಿಗಳು ಮತ್ತು ಬೆಂಬಲಿಗರು ಹೂವಿನ ಪಕಳೆಗಳನ್ನು ಎಸೆಯುತ್ತಿದ್ದರು.
16 ಕೋ.ರೂ.ಗಳ ಆಸ್ತಿಯ ಒಡೆಯ
ಆದಿತ್ಯ ಠಾಕ್ರೆ ತಾನು 16.05 ಕೋ.ರೂ.ಗಳ ಆಸ್ತಿಗಳನ್ನು ಹೊಂದಿರುವುದಾಗಿ ನಾಮಪತ್ರ ಸಲ್ಲಿಕೆ ಸಂದರ್ಭ ಘೋಷಿಸಿದ್ದಾರೆ. ಅವರು 11.38 ಕೋ.ರೂ.ಗಳ ಚರಾಸ್ತಿಗಳು ಮತ್ತು 4.67 ಕೋ.ರೂ.ಗಳ ಸ್ಥಿರಾಸ್ತಿಗಳನ್ನು ಹೊಂದಿದ್ದ್ದಾರೆ.
10.36 ಕೋ.ರೂ.ಗಳ ಬ್ಯಾಂಕ್ ಠೇವಣಿಗಳು ಮತ್ತು 6.5 ಲ.ರೂ. ಮೌಲ್ಯದ ಬಿಎಂಡಬ್ಲ್ಯು ಕಾರು ಅವರ ಆಸ್ತಿಗಳಲ್ಲಿ ಸೇರಿವೆ. ಅವರು 64.65 ಲ.ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನೂ ಹೊಂದಿದ್ದಾರೆ.
2011ರಲ್ಲಿ ಬಿ.ಎ. ಮತ್ತು 2015ರಲ್ಲಿ ಕಾನೂನು ಪದವಿಗಳನ್ನು ಪಡೆದಿರುವ ಆದಿತ್ಯ,ತನ್ನ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ಬಾಕಿಯಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.







