ಕೂಲಿ ಪರಿಷ್ಕರಣೆ ವಿಳಂಬ ಹಮಾಲಿ ಕಾರ್ಮಿಕರಿಂದ ಹಕ್ಕೊತ್ತಾಯ ಮೆರವಣಿಗೆ
ಮಂಗಳೂರು, ಅ.3: ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರ ಹೊಸ ಕೂಲಿ ದರ ಪರಿಷ್ಕರಣೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗುರುವಾರ ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕರು ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಹಕ್ಕೊತ್ತಾಯ ನಡೆಸಿದರು.
ಬೆಳಗ್ಗೆ ಮಾರುಕಟ್ಟೆಯ ವ್ಯವಹಾರಗಳು ಆರಂಭಗೊಳ್ಳುತ್ತಿದ್ದಂತೆ ಬಂದರು ಕಾರ್ಮಿಕರ ಕಟ್ಟೆ ಬಳಿ ಜಮಾಯಿಸಿ ಘೋಷಣೆ ಕೂಗುತ್ತಾ ಪೋರ್ಟ ರಸ್ತೆ, ಕೆನರಾ ಛೇಂಬರ್ ರಸ್ತೆ, ಜೆಎಂ ರಸ್ತೆ, ವರ್ತಕ ವಿಳಾಸ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್ ಕಾರ್ಮಿಕರು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಕಾರ್ಮಿಕರು ಸಾಕಷ್ಟು ಖರ್ಚು ಮಾಡಿದ್ದಾರೆ. ಪಧವೀದರರಾದರೂ ಉದ್ಯೋಗ ಇಲ್ಲವಾಗಿದೆ. ಹಳೆ ಬಂದರನ್ನು ಎಪಿಎಂಸಿ ಉಪ ಮಾರುಕಟ್ಟೆ ಘೋಷಿಸಿ ಹಲವು ವರ್ಷಗಳಾಗಿವೆ ಆದರೆ ಇದುವರೆಗೆ ಯಾವುದೇ ಹಮಾಲಿ ಕಾರ್ಮಿಕರಿಗೆ ಕೃಷಿ ಉತ್ಪನ್ನ ಮಾರಾಟ ಇಲಾಖೆಯಿಂದ ಯಾವುದೇ ಸವಲತ್ತು ನೀಡಿಲ್ಲ. ಮಾರುಕಟ್ಟೆಯ ವರ್ತಕರು ಕೂಲಿ ಪರಿಷ್ಕರಿಸದೆ ಉದ್ದಟತನದಿಂದ ವರ್ತಿಸುತ್ತಾ ಹಠಮಾರಿ ಧೋರಣೆ ತಳೆಯುತ್ತಿದ್ದಾರೆ. ವರ್ತಕರು ಕಾರ್ಮಿಕರ ತಾಳ್ಮೆ ಪರೀಕ್ಷಿಸಲು ಮುಂದಾಗದೆ ಕಾರ್ಮಿಕರ ಬೇಡಿಕೆಗಳ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಪಿ.ಎಸ್. ವಿಲ್ಲಿ ವಿಲ್ಸನ್ ಮಾತನಾಡಿ ವರ್ತಕರು ಕೂಲಿ ಪರಿಷ್ಕರಿಸಲು ವಿಳಂಬ ಮಾಡಿದರೆ ಹೋರಾಟ ತೀವ್ರಗೊಳಿಸಿ ಮುಷ್ಕರಕ್ಕೆ ಇಳಿಯಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಸಂಘದ ಜತೆ ಕಾರ್ಯದರ್ಶಿ ಚಂದ್ರಹಾಸ್ ಬಬ್ಬುಕಟ್ಟೆ ಸ್ವಾಗತಿಸಿದರು. ಕೋಶಾಧಿಕಾರಿ ಹರೀಶ್ ಕೆರೆಬೈಲ್ ವಂದಿಸಿದರು. ಉಪಾಧ್ಯಕ್ಷ ಹಸನ್ ಮೋನು ಬೆಂಗ್ರೆ, ಮುಖಂಡರಾದ ಮೊಯಿದಿನ್, ಮಾಧವ ಕಾವೂರು, ಮಜೀದ್ ಉಳ್ಳಾಲ, ಯಲ್ಲಪ್ಪ, ಸಿದ್ದೀಕ್ ಬೆಂಗ್ರೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.







