ಭಾರತದೊಂದಿಗೆ ಹೊಸ ವಾಣಿಜ್ಯ ಶರತ್ತುಗಳಿಗಾಗಿ ಮರುಸಂಧಾನ: ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್

ವಾಶಿಂಗ್ಟನ್, ಅ. 3: ವಿಶೇಷ ವ್ಯಾಪಾರ ಆದ್ಯತೆಗೆ ಭಾರತ ಅರ್ಹವಾಗಿದೆ ಎಂದು ಅಮೆರಿಕ ಭಾವಿಸುವುದಿಲ್ಲ, ಆದರೆ ಈ ವರ್ಷದ ಆರಂಭದಲ್ಲಿ ಈ ಸ್ಥಾನಮಾನವನ್ನು ಹಿಂದೆಗೆದುಕೊಂಡ ಬಳಿಕ ಅದು ಭಾರತದೊಂದಿಗೆ ಹೊಸ ಶರತ್ತುಗಳಿಗಾಗಿ ಮರುಸಂಧಾನ ನಡೆಸುತ್ತಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಗುರುವಾರ ‘ರಾಯ್ಟರ್ಸ್’ಗೆ ಹೇಳಿದ್ದಾರೆ.
ಅಮೆರಿಕದ ಉತ್ಪನ್ನಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಸಮಾನ ಅವಕಾಶವಿಲ್ಲ ಎಂದು ಆರೋಪಿಸಿ, ಅಮೆರಿಕವು ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸ್ (ಜಿಎಸ್‌ಪಿ) ಕಾರ್ಯಕ್ರಮವನ್ನು ಭಾರತದಿಂದ ಹಿಂದಕ್ಕೆ ಪಡೆದುಕೊಂಡಿತ್ತು. ಈ ಕಾರ್ಯಕ್ರಮದ ಪ್ರಕಾರ, ಅಮೆರಿಕಕ್ಕೆ ವಾರ್ಷಿಕ 5.6 ಬಿಲಿಯ ಡಾಲರ್ (ಸುಮಾರು 39,700 ಕೋಟಿ ರೂಪಾಯಿ) ಮೌಲ್ಯದವರೆಗಿನ ಉತ್ಪನ್ನಗಳನ್ನು ಯಾವುದೇ ಸುಂಕವಿಲ್ಲದೆ ರಫ್ತು ಮಾಡಲು ಭಾರತಕ್ಕೆ ಅವಕಾಶವಿತ್ತು.
ಇದಕ್ಕೆ ಪ್ರತಿಯಾಗಿ ಬಾದಾಮಿ, ಸೇಬು ಮತ್ತು ವಾಲ್‌ನಟ್ ಮುಂತಾದ ಅಮೆರಿಕದ 28 ಉತ್ಪನ್ನಗಳ ಮೇಲೆ ಭಾರತವು ಹೆಚ್ಚಿನ ತೆರಿಗೆಯನ್ನು ವಿಧಿಸಿದೆ.
‘‘ಜಿಎಸ್‌ಪಿ ಸಮಸ್ಯೆಯನ್ನು ಪರಿಹರಿಸಲು ನಮಗೆ ಸಾಧ್ಯವಾದರೆ ಅದು ಮುಕ್ತ ವ್ಯಾಪಾರದ ನಿಟ್ಟಿನಲ್ಲಿ ಇಡಲಾಗುವ ಅತಿ ದೊಡ್ಡ ಹೆಜ್ಜೆಯಾಗುತ್ತದೆ’’ ಎಂದು ಹೊಸದಿಲ್ಲಿಯಲ್ಲಿ ನಡೆದ ಭಾರತ ಆರ್ಥಿಕ ಶೃಂಗಸಭೆಯ ನೇಪಥ್ಯದಲ್ಲಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ವಿಲ್ಬರ್ ರಾಸ್ ಹೇಳಿದರು.
‘‘ಭಾರತ ಅತ್ಯಂತ ರಕ್ಷಣಾತ್ಮಕ ವ್ಯಾಪಾರ ನೀತಿಯನ್ನು ಅನುಸರಿಸುತ್ತಿದೆ ಹಾಗೂ ಎಲ್ಲರಿಗೂ ಸಮಾನ ಅವಕಾಶಕ್ಕಾಗಿ ನಾವು ಎದುರುನೋಡುತ್ತಿದ್ದೇವೆ’’ ಎಂದು ಅವರು ನುಡಿದರು.







