ಐನ್‌ಎನ್‌ಎಕ್ಸ್ ಮೀಡಿಯಾ ಪ್ರಕರಣ: ಜಾಮೀನು ಕೋರಿ ಸುಪ್ರೀಂ ಮೆಟ್ಟಿಲೇರಿದ ಚಿದಂಬರಂ

ಹೊಸದಿಲ್ಲಿ, ಅ. 3: ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದ ಆರೋಪಿಯಾಗಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಜಾಮೀನು ಕೋರಿ ಗುರುವಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ. ಚಿದಂಬರಂ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಪ್ರಕರಣವನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠದ ಮುಂದೆ ವಿನಂತಿಸಿದರು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಕೃಷ್ಣ ಮುರಳಿ ಅವರನ್ನು ಕೂಡ ಒಳಗೊಂಡಿದ್ದ ಪೀಠ, ಮನವಿಯ ತುರ್ತು ವಿಚಾರಣೆ ಬಗ್ಗೆ ನಿರ್ಧರಿಸಲು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ಕಳುಹಿಸಿ ಕೊಡಲಾಗುವುದು ಎಂದರು. ತನ್ನ ಜಾಮೀನು ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಸೆಪ್ಟಂಬರ್ 30ರಂದು ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಪ್ರಸ್ತುತ ಕಾರಾಗೃಹದಲ್ಲಿರುವ ಚಿದಂಬರಂ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.
Next Story





