ಸಮುದ್ರದಲ್ಲಿ ಮುಳುಗಿ ಬಾಲಕ ಮೃತ್ಯು
ಕೋಟ, ಅ.3: ಬುಧವಾರ ಗಾಂಧಿ ಜಯಂತಿಗೆ ರಜೆ ಇದ್ದ ಕಾರಣ ಗಾಳ ಹಾಕಿ ಮೀನು ಹಿಡಿಯಲು ಹೋದ 14 ವರ್ಷ ಪ್ರಾಯದ ಬಾಲಕನೊಬ್ಬ ಅಕಸ್ಮಿಕವಾಗಿ ಅರಬಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಪಾರಂಪಳ್ಳಿ ಪಡುಕೆರೆ ಕಡಲ ತೀರದಲ್ಲಿ ನಡೆದಿದೆ.
ಮೃತ ಬಾಲಕನ್ನು ಪಾರಂಪಳ್ಳಿಯ ವಿಕಾಸ್ (14) ಎಂದು ಗುರುತಿಸಲಾಗಿದೆ. ಕೋಟ ವಿವೇಕ ಹೈಸ್ಕೂಲ್‌ನ ಎಂಟನೇ ತರಗತಿ ವಿದ್ಯಾರ್ಥಿ ಯಾಗಿದ್ದ ವಿಕಾಸ್, ರಜೆಯ ಕಾರಣ ಸಂಜೆ ಐದು ಗಂಟೆ ಸುಮಾರಿಗೆ ಮೀನು ಹಿಡಿಯಲು ಸಮುದ್ರದ ಬಳಿ ತೆರಳಿದ್ದ. ಆದರೆ ಅಕಸ್ಮಿಕವಾಗಿ ಸಮುದ್ರದ ನೀರಿಗೆ ಬಿದ್ದ ಆತನ ಕೂಗನ್ನು ಕೇಳಿದ ಮಾವ ರವಿ ಪೂಜಾರಿ ನೀರಿನಲ್ಲಿ ಮುಳುಗುತಿದ್ದ ವಿಕಾಸನನ್ನು ಎತ್ತಿ ದಡಕ್ಕೆ ತಂದು ಕೂಡಲೇ ಚಿಕಿತ್ಸೆಗಾಗಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





