ಪ್ಯಾರಿಸ್: ಚೂರಿಯಿಂದ ಇರಿದು ನಾಲ್ವರು ಪೊಲೀಸರ ಕೊಲೆ
ಗುಂಡು ಹಾರಿಸಿ ಹಂತಕನ ಹತ್ಯೆ
ಪ್ಯಾರಿಸ್ (ಫ್ರಾನ್ಸ್), ಅ. 3: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಹೃದಯ ಭಾಗದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಗುರುವಾರ ಚೂರಿ ಝಳಪಿಸುತ್ತಾ ಬಂದ ವ್ಯಕ್ತಿಯೊಬ್ಬ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಿದ್ದಾನೆ. ಬಳಿಕ ಪೊಲೀಸರು ಅವನನ್ನು ಗುಂಡು ಹಾರಿಸಿ ಕೊಂದಿದ್ದಾರೆ.
ಮಧ್ಯಾಹ್ನದ ಊಟದ ಹೊತ್ತಿನಲ್ಲಿ ಆಕ್ರಮಣ ನಡೆದಿದೆ.
ಪೊಲೀಸ್ ಪ್ರಧಾನ ಕಚೇರಿ ಕಟ್ಟಡದ ಸಮೀಪದಲ್ಲಿರುವ ಮೆಟ್ರೊ ರೈಲು ನಿಲ್ದಾಣವನ್ನು ಮುಚ್ಚಲಾಗಿದೆ.
ಅದೇ ಪೊಲೀಸ್ ಕಟ್ಟಡದಲ್ಲಿ ಆಡಳಿತ ವಿಭಾಗದಲ್ಲಿ ಹಂತಕನು ಕೆಲಸ ಮಾಡುತ್ತಿದ್ದನು ಎಂದು ಮೂಲಗಳು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿವೆ.
ಗುರುವಾರ ಟರ್ಕಿಗೆ ಪ್ರಯಾಣಿಸಲಿದ್ದ ಫ್ರಾನ್ಸ್‌ನ ಆಂತರಿಕ ಸಚಿವ ಕ್ರಿಸ್ಟೋಫರ್ ಕ್ಯಾಸ್ಟನರ್ ತನ್ನ ಪ್ರವಾಸವನ್ನು ಮುಂದೂಡಿ, ಘಟನೆ ನಡೆದ ಸ್ಥಳವನ್ನು ಸಂದರ್ಶಿಸಿದ್ದಾರೆ.
‘‘ಜನರು ಚೆಲ್ಲಾಪಿಲ್ಲಿಯಾಗಿ ಓಡುತ್ತಿದ್ದರು. ಎಲ್ಲೆಲ್ಲೂ ಬೊಬ್ಬೆ ಕೇಳುತ್ತಿತ್ತು’’ ಎಂದು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಹೇಳಿದರು.
ಕಚೇರಿಯ ಒಳಗಿನ ವಿವಾದವು ಈ ಹತ್ಯಾಕಾಂಡಕ್ಕೆ ಕಾರಣವಾಗಿರಬೇಕು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.