ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಸ್ಥಾನಕ್ಕೆ ಪೈಪೋಟಿ

ಬೆಂಗಳೂರು, ಅ. 3: ಬೃಹತ್ ಬೆಂಗಳೂರು ಮಹಾನಗರದ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯ ಬಳಿಕ ಇದೀಗ ಆಡಳಿತ ಪಕ್ಷದ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು, ಯಾರಿಗೆ ಆ ಸ್ಥಾನ ನೀಡಬೇಕು ಎಂದು ಬಿಜೆಪಿ ನಾಯಕರು ತಲೆಕೆಡಿಸಿಕೊಂಡಿದ್ದಾರೆ.
ತೀವ್ರ ಕುತೂಹಲ ಮೂಡಿಸಿದ್ದ ಪಾಲಿಕೆ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಗೌತಮ್ ಕುಮಾರ್ ಜೈನ್‌ರನ್ನು ಮೇಯರ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಯಿತು. ಆ ಬಳಿಕ ಎಲ್ಲವೂ ಸುಗಮವಾಯಿತು ಎಂದುಕೊಳ್ಳುತ್ತಿರುವಾಗಲೇ ಇದೀಗ ಆಡಳಿತ ಪಕ್ಷದ ನಾಯಕ ಸ್ಥಾನವನ್ನು ತುಂಬುವ ಜವಾಬ್ದಾರಿ ವರಿಷ್ಠರ ಹೆಗಲೇರಿದೆ.
ಮೇಯರ್ ಸ್ಥಾನಕ್ಕೆ ಪ್ರಬಲ ಪೈಪೋಟಿ ನೀಡಿದ್ದ ಪದ್ಮನಾಭರೆಡ್ಡಿ, ಉಮೇಶ್ ಶೆಟ್ಟಿ, ಎಲ್.ಶ್ರೀನಿವಾಸ್ ಸೇರಿದಂತೆ ಹಲವು ಹಿರಿಯ ಸದಸ್ಯರು ಆಡಳಿತ ಪಕ್ಷದ ನಾಯಕರ ಸ್ಥಾನಕ್ಕೆ ತೀವ್ರ ಲಾಬಿ ನಡೆಸುತ್ತಿದ್ದಾರೆ. ಕೊನೆ ಕ್ಷಣದಲ್ಲಿ ಮೇಯರ್ ಸ್ಥಾನದಿಂದ ವಂಚಿತರಾದ ಪಧ್ಮನಾಭರೆಡ್ಡಿ ಪಕ್ಷದ ವರಿಷ್ಠರಲ್ಲಿ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ.
ಸಚಿವ ಆರ್.ಅಶೋಕ್ ಪದ್ಮನಾಭರೆಡ್ಡಿ ಪರವಾಗಿದ್ದು, ಆಡಳಿತ ಪಕ್ಷದ ಸ್ಥಾನದಲ್ಲಿ ಕೂರಿಸಲು ಶತ ಪ್ರಯತ್ನ ನಡೆಸಿದ್ದಾರೆ. ನಾಲ್ಕು ವರ್ಷಗಳಿಂದ ಮೈತ್ರಿ ಆಡಳಿತವಿದ್ದು, ಅದರಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದ ರೆಡ್ಡಿಗೆ ಈಗ ಆಡಳಿತ ಪಕ್ಷದ ನಾಯಕ ಸ್ಥಾನ ನೀಡಬೇಕಾ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಬಿಜೆಪಿಯಲ್ಲಿಯೂ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.
ತಮ್ಮನ್ನು ಆಡಳಿತ ಪಕ್ಷದ ನಾಯಕನ ಸ್ಥಾನಕ್ಕೆ ಪರಿಗಣಿಸಬೇಕು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಯಾವುದೇ ಪ್ರಮುಖ ಹುದ್ದೆಯನ್ನು ಪಾಲಿಕೆಯಲ್ಲಿ ನೀಡಿಲ್ಲ. ಹಾಗಾಗಿ ತಮಗೆ ಆಡಳಿತ ಪಕ್ಷದ ನಾಯಕನ ಸ್ಥಾನವನ್ನು ನೀಡಬೇಕು ಎಂದು ಉಮೇಶ್ ಶೆಟ್ಟಿ, ಎಲ್.ಶ್ರೀನಿವಾಸ್ ಸೇರಿದಂತೆ ಹಲವು ಹಿರಿಯರು ಸಹ ವರಿಷ್ಠರಿಗೆ ಮನವಿ ಮಾಡಿದ್ದಾರೆ.
ಆಡಳಿತ ಪಕ್ಷದ ನಾಯಕರನ್ನು ಆಯ್ಕೆ ಮಾಡುವ ಸಂಬಂಧ ದಸರಾ ಮುಗಿದ ಬಳಿಕ ನಗರದ ಬಿಜೆಪಿಯ ಎಲ್ಲ ಶಾಸಕರು ಸಭೆ ಸೇರಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಅನಂತರ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಅಂತಿಮ ನಿರ್ಧಾರಕ್ಕೆ ನೀಡಲಿದ್ದಾರೆ.







