ಸಾಮಾಜಿಕ ಜಾಲತಾಣದಲ್ಲಿ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಒಡ್ಡಿದ ಇಬ್ಬರ ಬಂಧನ

ಮುಂಬೈ, ಅ.3: ಸಾಮಾಜಿಕ ಜಾಲತಾಣದಲ್ಲಿ ಸೆ.26ರಂದು ಹಿಂದಿ ಸಿನೆಮ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಒಡ್ಡಿದ ಇಬ್ಬರು ಅರೋಪಿಗಳನ್ನು ಗುರುವಾರ ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಬಂಧಿತ ಆರೋಪಿಗಳನ್ನು ಜಾಕಿ ಬಿಷ್ಣೋಯ್ ಅಲಿಯಾಸ್ ಲಾರೆನ್ಸ್ ಬಾಬಲ್ ಮತ್ತು ಜಗದೀಶ್ ಎಂದು ಗುರುತಿಸಲಾಗಿದೆ. ಇವರಿಬ್ಬರು ವಾಹನ ಕಳವು ಹಾಗೂ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದರು. ಲಾರೆನ್ಸ್ ಎಂಬ ಹೆಸರಿನಲ್ಲಿ ಸೆ.26ರಂದು ಫೇಸ್‌ಬುಕ್‌ನಲ್ಲಿ ಸಲ್ಮಾನ್‌ಖಾನ್‌ಗೆ ಬೆದರಿಕೆ ಒಡ್ಡಲಾಗಿತ್ತು.
ಜೋಧ್‌ಪುರದ ಕುಖ್ಯಾತ ಲಾರೆನ್ಸ್ ಗ್ಯಾಂಗ್‌ನ ಸಹಚರರು ಎಂದು ಜನ ಭಾವಿಸುತ್ತಾರೆ ಎಂಬುದು ಇವರ ಯೋಜನೆಯಾಗಿತ್ತು. ಗುರುವಾರ ವಿಲಾಸೀ ಕಾರೊಂದನ್ನು ಕದ್ದು ಅದನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಪೊಲೀಸರು ಅನುಮಾನದ ಮೇರೆಗೆ ತಡೆದಿದ್ದಾರೆ. ವಿಚಾರಣೆ ಸಂದರ್ಭ ಇವರು ಕಾರು ಕಳವು ಹಾಗೂ ಡ್ರಗ್ಸ್ ಕಳ್ಳಸಾಗಣೆ ಮಾಡುವವರು ಎಂಬುದು ಬೆಳಕಿಗೆ ಬಂದಿದೆ. ಇನ್ನಷ್ಟು ವಿಚಾರಣೆ ನಡೆಸಿದಾಗ ಪ್ರಚಾರ ಗಿಟ್ಟಿಸಿಕೊಳ್ಳಲು ಸಾಮಾಜಿಕ ಮಾಧ್ಯಮದಲ್ಲಿ ಸಲ್ಮಾನ್‌ಖಾನ್‌ಗೆ ಬೆದರಿಕೆ ಒಡ್ಡಿದ್ದ ವ್ಯಕ್ತಿ ತಾನೇ ಎಂಬ ಮಾಹಿತಿಯನ್ನು ಜಾಕಿ ತಿಳಿಸಿದ್ದಾನೆ. ಇವರಿಬ್ಬರ ಮೇಲೆ ಈ ಹಿಂದೆಯೂ ವಾಹನ ಕಳವಿನ ಹಲವು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.





