ಡಾ. ಕಫೀಲ್ ಖಾನ್ ವಿರುದ್ಧ ಹೊಸ ತನಿಖೆಗೆ ಆದೇಶಿಸಿದ ಉತ್ತರಪ್ರದೇಶ ಸರಕಾರ
ಲಕ್ನೋ, ಅ. 3: ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಮಾನತುಗೊಂಡ ಮಕ್ಕಳ ತಜ್ಞ ಡಾ. ಕಫೀಲ್ ಖಾನ್ ಅವರ ಮೇಲಿನ ಕರ್ತವ್ಯ ಸಂದರ್ಭದ ಅಶಿಸ್ತು, ಭ್ರಷ್ಟಾಚಾರ ಹಾಗೂ ಸಂಪೂರ್ಣ ನಿರ್ಲಕ್ಷದ ಆರೋಪದ ಕುರಿತು ಹೊಸ ತನಿಖೆ ನಡೆಸುವಂತೆ ಉತ್ತರಪ್ರದೇಶ ಸರಕಾರ ಆದೇಶಿಸಿದೆ.
ಈ ಹಿಂದೆ ಹಿರಿಯ ಐಎಎಸ್ ಅಧಿಕಾರಿ ನಡೆಸಿದ ತನಿಖೆಯ ವರದಿಯನ್ನು 2019 ಎಪ್ರಿಲ್‌ನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿತ್ತು. ಸರಕಾರ ಮಾಡಿದ ನಾಲ್ಕು ಆರೋಪಗಳಲ್ಲಿ ಎರಡರಲ್ಲಿ ಡಾ. ಕಫೀಲ್ ಖಾನ್ ಮುಕ್ತರಾಗಿದ್ದಾರೆ. ಆದರೆ, ದೋಷ ಮುಕ್ತರಾಗಿರುವ ಕಫೀಲ್ ಖಾನ್ ಅವರನ್ನು ಮತ್ತೆ ಸೇವೆಗೆ ತೆಗೆದುಕೊಳ್ಳಬೇಕೇ ಬೇಡವೇ ಎಂಬ ಅಂತಿಮ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಲಿದೆ.
ಲೋಕಭವನದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣಗಳ ಪ್ರಾಥಮಿಕ ಕಾರ್ಯದರ್ಶಿ ರಜನೀಶ್ ದುಬೆ, ಡಾ. ಕಫೀಲ್ ಖಾನ್ ಅವರ ವಿರುದ್ಧ ಒಟ್ಟು 7 ಆರೋಪಗಳ ಬಗ್ಗೆ ಹೊಸ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಈ ಪ್ರಕರಣಗಳಲ್ಲಿ ಕಫೀಲ್ ಖಾನ್ ಅವರನ್ನು ದೋಷ ಮುಕ್ತಗೊಳಿಸಲಾಗಿಲ್ಲ. ತನಿಖೆಯ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಹಾಗೂ ಪ್ರಧಾನ ವಾಹಿನಿಯ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ದುಬೆ ಹೇಳಿದ್ದಾರೆ.
ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಘಟನೆಯಲ್ಲಿ ಮೇಲ್ನೋಟಕ್ಕೆ ಅವರು ತಪ್ಪೆಸಗಿದ್ದಾರೆ ಎಂದು ತಿಳಿದುಬಂದ ಬಳಿಕ ಕಫೀಲ್ ಖಾನ್ ವಿರುದ್ಧ ಇಲಾಖಾ ತನಿಖೆ ಶಿಫಾರಸು ಮಾಡಲಾಗಿತ್ತು. ಸರಕಾರಿ ಸೇವೆಯ ಸಂದರ್ಬ ನಿವಾಸಿ ವೈದ್ಯ ಹಾಗೂ ನಿಯಮಿತ ವಕ್ತಾರರ ಕಾರ್ಯ ನಿರ್ವಹಿಸುತ್ತಿದ್ದಾಗಲೂ ಅವರು ಖಾಸಗಿ ಚಿಕಿತ್ಸೆ ನೀಡಿರುವುದು ಹಾಗೂ ಖಾಸಗಿ ಚಿಕಿತ್ಸಾ ಕೇಂದ್ರ ನಡೆಸುತ್ತಿರುವುದು ತಿಳಿದು ಬಂದಿತ್ತು. ಈ ಎರಡು ಆರೋಪಗಳು ಗಂಭೀರ ಭ್ರಷ್ಟಾಚಾರ ಹಾಗೂ ನಿಯಮದ ಸಂಪೂರ್ಣ ಉಲ್ಲಂಘನೆಯ ಪ್ರಕರಣ ಎಂದು ದುಬೆ ತಿಳಿಸಿದ್ದಾರೆ.