ಸಂಸದರ ಒಂದು ಸಭೆಯೂ ನಡೆಸಿಲ್ಲ, ಕೇಳಿದರೆ ಹಾರಿಕೆ ಉತ್ತರ ಕೊಡುತ್ತಿದ್ದಾರೆ: ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್
ನೆರೆ ಪರಿಹಾರ ವಿಚಾರದಲ್ಲಿ ಬಿಎಸ್‌ವೈ, ಕೇಂದ್ರ ಸಚಿವರ ವಿರುದ್ಧ ತೀವ್ರ ಆಕ್ರೋಶ

ಚಾಮರಾಜನಗರ, ಅ.4: ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಎಲ್ಲಾ ಸಂಸದರ ಜೊತೆ ಸಭೆ ನಡೆಸಬೇಕಿತ್ತು. ಈಗಾಗಲೇ ಎಲ್ಲರ ನಿಯೋಗವನ್ನು ಕೇಂದ್ರಕ್ಕೆ ಕರೆದೋಯ್ಯಬೇಕಿತ್ತು. ಕೇಳಿದರೆ ಬರೀ ಹಾರಿಕೆ ಉತ್ತರ ಕೊಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಯಡಿಯೂರಪ್ಪ ಅವರ ಅಸಹಾಯಕತೆ ತೋರಿಸುತ್ತದೆ. ರಾಜ್ಯದ ಜನರ ತಾಳ್ಮೆ ಪರೀಕ್ಷೆ ಮಾಡಬೇಡಿ. ನಿಮ್ಮ ಮೋಜು ಮಸ್ತಿಯನ್ನು ಜನ ನೋಡುತ್ತಿದ್ದಾರೆ. ಅವರು ಕಣ್ಮುಚ್ಚಿ ಕುಳಿತಿಲ್ಲ, ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಕೇಂದ್ರ ಸರಕಾರದಿಂದ ರಾಜ್ಯಕ್ಕೆ ದೊರಕಬೇಕಾದ ನೆರೆ ಪರಿಹಾರ ವಿಳಂಬ ವಿಚಾರದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ತಾಳ್ಮೆಗೆ ಒಂದು ಮಿತಿ ಇದೆ. 25 ಜನ ಸಂಸದರಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಒಂದು ಸಭೆಯನ್ನೂ ನಡೆಸಿಲ್ಲ. ನಾವೆಲ್ಲಿ ಹೋಗೋದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.





