ಮುಂದಿನ ವರ್ಷದ ಮೇ ತಿಂಗಳಿನಲ್ಲಿ ಭಾರತಕ್ಕೆ ರಫೇಲ್ ವಿಮಾನಗಳ ಮೊದಲ ತಂಡ:ಐಎಎಫ್

ಹೊಸದಿಲ್ಲಿ, ಅ.4: 36 ರಫೇಲ್ ಯುದ್ಧ ವಿಮಾನಗಳ ಪೈಕಿ ಮೊದಲ ನಾಲ್ಕು ವಿಮಾನಗಳು ಮುಂದಿನ ವರ್ಷದ ಮೇ ತಿಂಗಳಿನಲ್ಲಿ ಭಾರತಕ್ಕೆ ಆಗಮಿಸಲಿವೆ ಮತ್ತು ಈ ವಿಮಾನವು ಐಎಎಫ್‌ನ ಯುದ್ಧ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ರಾಕೇಶ್ ಕುಮಾರ ಭದೌರಿಯಾ ಅವರು ಶುಕ್ರವಾರ ಇಲ್ಲಿ ತಿಳಿಸಿದರು.
ಸೆ.30ರಂದು ಐಎಎಫ್ ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಳಿಕ ತನ್ನ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಭದೌರಿಯಾ,ರಫೇಲ್ ಯುದ್ಧವಿಮಾನಗಳು ಮತ್ತು ಎಸ್-400 ಕ್ಷಿಪಣಿ ವ್ಯವಸ್ಥೆಗಳ ಖರೀದಿಯು ವಾಯುಪಡೆಯ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದರು.
ಐದು ಶತಕೋಟಿ ಡಾ.ಗಳ ವೆಚ್ಚದಲ್ಲಿ ಎಸ್-400 ಕ್ಷಿಪಣಿ ವ್ಯವಸ್ಥೆಗಳ ಖರೀದಿಗಾಗಿ ಭಾರತವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಷ್ಯಾದೊಂದಿಗೆ ಒಪ್ಪಂದಕ್ಕೆ ಅಂಕಿತವನ್ನು ಹಾಕಿತ್ತು.
ಅಪಾಚೆ ದಾಳಿ ಹೆಲಿಕಾಪ್ಟರ್‌ಗಳು ಮತ್ತು ಭಾರೀ ಸಾಮರ್ಥ್ಯದ ಚಿನೂಕ್ ಹೆಲಿಕಾಪ್ಟರ್‌ಗಳ ಸೇರ್ಪಡೆಯು ವಾಯುಪಡೆಯ ಒಟ್ಟಾರೆ ವೈಮಾನಿಕ ಸಾಮರ್ಥ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದು ಭದೌರಿಯಾ ತಿಳಿಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೊದಲ ರಫೇಲ್ ಯುದ್ಧವಿಮಾನವನ್ನು ಸ್ವೀಕರಿಸಲು ಅ.7ರಂದು ಫ್ರಾನ್ಸ್‌ಗೆ ಮೂರು ದಿನಗಳ ಭೇಟಿಗೆ ತೆರಳಲಿದ್ದಾರೆ.
ಭಾರತವು ಮೊದಲ ರಫೇಲ್ ಯುದ್ಧವಿಮಾನಗಳ ತಂಡವನ್ನು ಮುಂದಿನ ವಾರ ಸ್ವೀಕರಿಸಲಿದೆಯಾದರೂ ಅವು ಮುಂದಿನ ವರ್ಷದ ಮೇ ತಿಂಗಳಿನಿಲ್ಲಷ್ಟೇ ಇಲ್ಲಿಗೆ ಆಗಮಿಸಲಿವೆ ಎಂದು ಭದೌರಿಯಾ ತಿಳಿಸಿದರು.
ಸುಮಾರು 58,000 ಕೋ.ರೂ.ವೆಚ್ಚದಲ್ಲಿ 36 ರಫೇಲ್ ಯುದ್ಧವಿಮಾನಗಳ ಖರೀದಿಗಾಗಿ ಭಾರತವು 2016,ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್‌ನೊಂದಿಗೆ ಅಂತರ್-ಸರಕಾರಿ ಒಪ್ಪಂದಕ್ಕೆ ಸಹಿ ಹಾಕಿತ್ತು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಭದೌರಿಯಾ,36 ರಫೇಲ್ ವಿಮಾನಗಳ ಇನ್ನೊಂದು ತಂಡವನ್ನು ಖರೀದಿಸುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ ಮತ್ತು ಕಳೆದ ವರ್ಷ ಪ್ರಕಟಿಸಿದ್ದಂತೆ 114 ಯುದ್ಧ ವಿಮಾನಗಳ ಖರೀದಿಯ ಮೇಲೆ ವಾಯುಪಡೆಯು ಗಮನವನ್ನು ಕೇಂದ್ರೀಕರಿಸಿದೆ ಎಂದು ತಿಳಿಸಿದರು.
ರಫೇಲ್ ಯುದ್ಧವಿಮಾನಗಳ ಮೊದಲ ತಂಡವನ್ನು ಭಾರತ್-ಪಾಕ್ ಗಡಿಯಿಂದ ಸುಮಾರು 220 ಕಿ.ಮೀ.ಅಂತರದಲ್ಲಿರುವ ಹರ್ಯಾಣದ ಅಂಬಾಲಾದಲ್ಲಿ ಮತ್ತು ಎರಡನೇ ತಂಡವನ್ನು ಪಶ್ಚಿಮ ಬಂಗಾಳದ ಹಸಿಮರಾ ವಾಯುನೆಲೆಯಲ್ಲಿ ನಿಯೋಜಿಸಲಾಗುವುದು ಎಂದು ಐಎಎಫ್ ಮೂಲಗಳು ತಿಳಿಸಿವೆ.







