ಜಮ್ಮು ಕಾಶ್ಮೀರದಲ್ಲಿ ಮಕ್ಕಳ ಬಂಧನ, ಸಾವು ಸಂಭವಿಸಿಲ್ಲ ಎಂಬ ಪೊಲೀಸರ ವರದಿ ಸುಳ್ಳು
‘thewire.in’ ವೀಡಿಯೊದಲ್ಲಿ ಬಹಿರಂಗ

ಹೊಸದಿಲ್ಲಿ,ಸೆ.4: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಅಲ್ಲಿ ಯಾವ ಮಕ್ಕಳನ್ನೂ ಬಂಧನದಲ್ಲಿಟ್ಟಿಲ್ಲ ಮತ್ತು ಒಂದೂ ಸಾವು ಸಂಭವಿಸಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಉಚ್ಚ ನ್ಯಾಯಾಲಯದ ಬಾಲಾಪರಾಧ ನ್ಯಾಯ ಸಮಿತಿ ಈ ವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಹಲವು ದೋಷಗಳು ಕಂಡುಬಂದಿದ್ದು ಇದು 55 ಪುಟಗಳ ಸಂಪೂರ್ಣ ವರದಿಯ ವಿಶ್ವಾಸಾರ್ಹತೆಯ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ ಎಂದು thewire.in ಸುದ್ದಿ ಜಾಲತಾಣ ವರದಿ ಮಾಡಿದೆ.
ಈ ವರದಿಯಲ್ಲಿ, ಆಗಸ್ಟ್ 5ರಂದು 370ನೇ ವಿಧಿ ರದ್ದುಗೊಳಿಸಿದ ಪರಿಣಾಮ ಕಣಿವೆ ರಾಜ್ಯದಲ್ಲಿ ಯಾವ ಮಗುವೂ ಸತ್ತಿಲ್ಲ ಎಂದು ತಿಳಿಸಲಾಗಿತ್ತು. ಆದರೆ ಆಗಸ್ಟ್ 5ರಂದೇ 17ರ ಹರೆಯದ ಉಸೈಬ್ ಅಲ್ತಾಫ್ ಎನ್ನುವ ಬಾಲಕನನ್ನು ಶ್ರೀನಗರದಲ್ಲಿ ಭದ್ರತಾ ಪಡೆ ಸಿಬ್ಬಂದಿ ಬೆನ್ನಟ್ಟಿದ ಸಂದರ್ಭ ಆತ ನದಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಆತನ ಹೆತ್ತವರು ಆರೋಪಿಸಿರುವುದು thewire.in
ಮಾಡಿರುವ ವೀಡಿಯೊದಲ್ಲಿ ದಾಖಲಾಗಿದೆ. ಆದರೆ ಅಲ್ತಾಫ್ ಸಾವಿನ ವರದಿಗಳು ಆಧಾರರಹಿತ ಎಂದು ಸಮಿತಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಅಲ್ತಾಫ್ ಸಾವಿನ ವರದಿಯನ್ನು ನಿರಾಕರಿಸಿರುವ ಶ್ರೀನಗರ ಡಿಜಿಪಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮ ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸುವ ಕುರಿತು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದ ದಿನವೇ ಸಂಭವಿಸಿದ್ದ ಅಲ್ತಾಫ್ ಎಂಬ ಬಾಲಕ ಸಾವಿನ ಸುದ್ದಿಯನ್ನು ‘ಹಫಿಂಗ್‌ಟನ್ ಪೋಸ್ಟ್’ ಸುದ್ದಿಜಾಲತಾಣ ವರದಿ ಮಾಡಿತ್ತು ನಂತರ ಈ ಸುದ್ದಿ thewire.in ಮತ್ತು ‘ಹಿಂದೂಸ್ಥಾನ್ ಟೈಮ್ಸ್’ ಸೇರಿದಂತೆ ಇತರ ದಿನಪತ್ರಿಕೆ ಮತ್ತು ಸುದ್ದಿ ಜಾಲತಾಣಗಳಲ್ಲಿ ಪ್ರಕಟವಾಗಿತ್ತು ಎಂದು ತಿಳಿಸಿದ್ದಾರೆ.
ಆಗಸ್ಟ್ 19ರಂದು ನ thewire.in ವರದಿಗಾರ ಅಲ್ತಾಫ್ ಮನೆಗೆ ತೆರಳಿ ಬಾಲಕನ ಅಂತ್ಯಕ್ರಿಯೆಯ ವೀಡಿಯೊ ದಾಖಲಿಸಿದ್ದರು. ಈ ಸಂದರ್ಭದಲ್ಲಿ ಅವರು ಬಾಲಕನ ತಂದೆಯ ಹೇಳಿಕೆಯನ್ನೂ ದಾಖಲಿಸಿದ್ದರು.ಮರುದಿನ ಈ ವೀಡಿಯೊವನ್ನು thewire.inನ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಲಾಗಿತ್ತು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಅಲ್ತಾಫ್ ತಂದೆಯ ಪ್ರಕಾರ, ಆಗಸ್ಟ್ 5ರಂದು ಕಣಿವೆ ರಾಜ್ಯದ ವಿಶೇಷ ಸ್ಥಾನಮಾನ ಹಿಂಪಡೆಯಲಾದ ದಿನ ಬೆಳಗ್ಗೆ ಬಾಲಕ ಮತ್ತು ಆತನ ಗೆಳೆಯರು ಫುಟ್ಬಾಲ್ ಆಡುತ್ತಿದ್ದರು. ಈ ಸಂದರ್ಭದಲ್ಲಿ ಭದ್ರತಾಪಡೆಗಳು ಪರಂಪೊರದ ಕಾಲು ಮೇಲ್ಸೇತುವೆಯಲ್ಲಿ ಹುಡುಗರನ್ನು ಸುತ್ತುವರಿದಾಗ ಭಯಗೊಂಡ ಅಲ್ತಾಫ್ ನದಿಗೆ ಜಿಗಿದಿದ್ದ. ಸೇತುವೆಯ ಕೆಳಗೆ ಪೊದೆಯನ್ನು ಹಿಡಿದು ನೇತಾಡುತ್ತಿದ್ದ ಆತನ ಕೈಗಳಿಗೆ ಭದ್ರತಾಪಡೆ ಸಿಬ್ಬಂದಿ ಹೊಡೆದ ಕಾರಣ ಆತ ನದಿಗೆ ಬಿದ್ದು ಸಾವನ್ನಪ್ಪಿದ್ದಾನೆ. ನಮ್ಮ ಮನೆಯಲ್ಲಿ ಟಿವಿ ಇಲ್ಲ ಹಾಗಾಗಿ ಅಂದು ಪ್ರಧಾನಿ ಮೋದಿ 370ನೇ ವಿಧಿ ರದ್ದುಗೊಳಿಸಿದ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದು ಅಲ್ತಾಫ್ ತಂದೆ ಹೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಅಲ್ತಾಫ್ ಸಾವಿನ ಸುದ್ದಿ ನಿರಾಕರಿಸಿರುವ ಡಿಜಿಪಿಯ ವರದಿಯನ್ನು ಉಚ್ಚ ನ್ಯಾಯಾಲಯದ ನಾಲ್ಕು ಸದಸ್ಯರ ಸಮಿತಿಯ ವರದಿಯ ಭಾಗವಾಗಿ ಸೇರಿಸಲಾಗಿದೆ. ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಏನಾಕ್ಷಿ ಗಂಗೂಲಿ ಮತ್ತು ಶಾಂತಾ ಸಿನ್ಹಾ ಅವರು ಸಲ್ಲಿಸಿದ್ದ ರಿಟ್ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಶ್ರೇಷ್ಟ ನ್ಯಾಯಾಲಯ ಸೂಚಿಸಿದ ಹಿನ್ನೆಲೆಯಲ್ಲಿ ಈ ವರದಿಯನ್ನು ಒಪ್ಪಿಸಲಾಗಿದೆ.
ಕಾಶ್ಮೀರದಲ್ಲಿ ಮಕ್ಕಳನ್ನು ಅಕ್ರಮ ಬಂಧನದಲ್ಲಡಲಾಗಿದೆ ಎಂಬ ವರದಿಯನ್ನು ನಿರಾಕರಿಸಿರುವ ಡಿಜಿಪಿಯ ವರದಿಯಲ್ಲಿ ವಾಶಿಂಗ್ಟನ್ ಪೋಸ್ಟ್, ಸ್ಕ್ರಾಲ್, ಕ್ವಿಂಟ್, ಕ್ಯಾರವಾನ್ ಮತ್ತು ಟಿಆರ್‌ಟಿ ವರ್ಲ್ಡ್ ಸೇರಿದಂತೆ ಹಲವು ಪ್ರತಿಷ್ಟಿತ ಸುದ್ದಿ ಸಂಸ್ಥೆಗಳನ್ನು ಟೀಕಿಸಲಾಗಿದೆ. ಅಲ್ತಾಫ್ ನದಿಯಲ್ಲಿ ಮುಳುಗಿ ಸಾವು ಮತ್ತು ಆತನ ಅಂತ್ಯಕ್ರಿಯೆ ನಡೆದಿರುವುದು ನಿಜವಾಗಿದ್ದರೂ ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರು ವಿಫಲವಾಗಿರುವಾಗ ಡಿಜಿಪಿ ತಮ್ಮ ವರದಿಯಲ್ಲಿ ಉಲ್ಲೇಖಿಸಿರು ಇತರ ಪರಿಶೀಲನಾ ವರದಿಗಳ ನಿಜಾಂಶದ ಬಗ್ಗೆಯೂ ಅನುಮಾನ ಮೂಡುತ್ತದೆ ಎಂದು thewire.in ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 144 ಬಾಲಾಪರಾಧಿಗಳನ್ನು ಬಂಧಿಸಲಾಗಿದೆ. ಇವರಲ್ಲಿ ಅತೀಸಣ್ಣವರೆಂದರೆ 9 ಮತ್ತು 11ರ ಹರೆಯದ ಮಕ್ಕಳು. ಈ ಪೈಕಿ ಇಬ್ಬರನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಬಂಧಿತ ಮಕ್ಕಳಲ್ಲಿ ಬಹುತೇಕರನ್ನು ಅದೇ ದಿನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದ್ದರೂ ಈ ಮಕ್ಕಳ ವಿರುದ್ಧ ಅಪರಾಧಿ ಪ್ರಕ್ರಿಯೆ ಸಂಹಿತೆಯ 107ನೇ ವಿಧಿ ಅಥವಾ ನಿಯಂತ್ರಣಾತ್ಮಕ ಬಂಧನದಡಿ ದೂರು ದಾಖಲಿಸಲಾಗಿದೆ. ಅಂದರೆ ಈ ಮಕ್ಕಳನ್ನು ಕೇವಲ ಸಂಶಯದ ಆಧಾರದಲ್ಲಿ ಬಂಧಿಸಿ ಒಂದಿಡೀ ದಿನ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.







