ಪಾಯಲ್ ತಡ್ವಿ ಮೃತಪಟ್ಟ ಆಸ್ಪತ್ರೆಯಲ್ಲಿ ಮರುಕಳಿಸಿದ ರ‍್ಯಾಗಿಂಗ್

ಮುಂಬೈ, ಅ.4: ಮುಂಬೈಯ ಬಿವೈಎಲ್ ನಾಯರ್ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿನಿ ಪಾಯಲ್ ತಡ್ವಿ ಸಾವಿನ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಮತ್ತೆ ಈ ಆಸ್ಪತ್ರೆಯಲ್ಲಿ ರ‍್ಯಾಗಿಂಗ್ ಮತ್ತು ಪ್ರತಿರ‍್ಯಾಗಿಂಗ್ ಪ್ರಕರಣ ಮರುಕಳಿಸಿದೆ ಎಂದು ‘ಮುಂಬೈ ಮಿರರ್’ ಪತ್ರಿಕೆ ವರದಿ ಮಾಡಿದೆ. ಈ ಪ್ರಕರಣದಲ್ಲಿ ಯಾರ ತಪ್ಪು ಎಂದು ಆಸ್ಪತ್ರೆ ಇನ್ನಷ್ಟೇ ನಿರ್ಧರಿಸಬೇಕಿದ್ದು ರ್ಯಾಗಿಂಗ್ ವರದಿ ಮೊದಲು ಸುದ್ದಿಯಾದಾಗಲೇ ಆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ಈಗಲೇ ವಿಳಂಬವಾಗಿದೆ ಎಂದು ವರದಿ ತಿಳಿಸಿದೆ.
ನನ್ನನ್ನು ರ‍್ಯಾಗಿಂಗ್ಗೆ ಒಳಪಡಿಸಿದ್ದಾರೆ ಎಂದು ಪ್ರಥಮ ವರ್ಷದ ವೈದ್ಯಕೀಯ ಸ್ನಾತಕೋತರ ಪದವಿ ವೈದ್ಯೆ ಸಾದಿಯಾ ಶೇಕ್ ತಡ್ವಿ ಆರೋಪಿಸಿದ ಹಿನ್ನೆಲೆಯಲ್ಲಿ ಹಿರಿಯ ವೈದ್ಯೆ ರೇಶ್ಮಾ ಬಂಗರ್ ಸೆಪ್ಟಂಬರ್ 12ರಂದು ತನ್ನನ್ನು ಕೋಣೆಯೊಳಗೆ ಕೂಡಿಹಾಕಿದ್ದರು. ಇದರಿಂದ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು ನಂತರ ಬಹಳಷ್ಟು ಮನವಿ ಮಾಡಿದ ನಂತರ ರೇಶ್ಮಾ ಕೋಣೆಯಿಂದ ಹೊರಬಂದಿದ್ದರು. ಆದರೆ ಈ ಇಬ್ಬರೂ ಸೇರಿರುವ ಇಎನ್‌ಟಿ ವಿಭಾಗದ ಮುಖ್ಯಸ್ಥರು ಈ ಪ್ರಕರಣವನ್ನು ರ‍್ಯಾಗಿಂಗ್ನಿಗ್ರಹ ಸಮಿತಿಗೆ ಸೆಪ್ಟಂಬರ್ 17ರಂದು ಅಂದರೆ ಐದು ದಿನ ವಿಳಂಬವಾಗಿ ಒಪ್ಪಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸಾದಿಯಾ ತನ್ನ ಜೊತೆ ಒರಟಾಗಿ ವರ್ತಿಸುತ್ತಾರೆ ಎಂದು ರೇಶ್ಮಾ ರ್ಯಾಗಿಂಗ್‌ನಿಗ್ರಹ ಸಮಿತಿಗೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಾದಿಯಾ, ರೇಶ್ಮಾ ತನ್ನ ಮೇಲೆ ಹೊರೆ ಹಾಕುತ್ತಾರೆ ಮತ್ತು ಕೆಲವೊಮ್ಮೆ ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿದ್ದರು. ಪಾಯಲ್ ತಡ್ವಿ ಸಾವಿನ ನಂತರ ಕಿರಿಯರು ಮತ್ತು ಹಿರಿಯರ ನಡವಿನ ಸಂಘರ್ಷಗಳ ದೂರುಗಳಲ್ಲಿ ಹೆಚ್ಚಳವಾಗಿದೆ ಎಂದು ಆಸ್ಪತ್ರೆಯ ಡೀನ್ ರಮೇಶ್ ಭರ್ಮಲ್ ತಿಳಿಸಿದ್ದಾರೆ.







