ಅ.5ರಿಂದ ಕನ್ನರ್ಪಾಡಿಯಲ್ಲಿ ಶಾರದಾ ಮಹೋತ್ಸವ
ಉಡುಪಿ, ಅ.5: ಕಿನ್ನಿಮುಲ್ಕಿ ಕನ್ನರ್ಪಾಡಿಯ ಸಾರ್ವಜನಿಕ ಶ್ರೀಶಾರದಾ ಮಹೋತ್ಸವ ಸಮಿತಿ ವತಿಯಿಂದ ದ್ವಿತೀಯ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವು ಅ.5ರಿಂದ ಅ.8ರವರೆಗೆ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಬಳಿಯ ಮೈದಾನದಲ್ಲಿ ಜರಗಲಿದೆ.
ಸಂಜೆ 6 ಗಂಟೆಗೆ ಭಂಡಾರಕೇರಿ ಮಠದ ಶ್ರೀವಿದ್ಯೇಶ ತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ.ರಘುಪತಿ ಭಟ್ ಮೊದಲಾದವರು ಭಾಗವಹಿಸಲಿದ್ದಾರೆ. ಈ ಸಂದರ್ಭ ಸಾಧಕರಿಗೆ ಅಭಿನಂದನೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕೆದ್ಲಾಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಅ.6ರಂದು ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ 2 ಗಂಟೆಯಿಂದ ಕಿನ್ನಿಮುಲ್ಕಿ ವೀರಭದ್ರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ತಾಳಮದ್ದಳೆ, ಅ.8ರಂದು ಸಂಜೆ 5 ಗಂಟೆಗೆ ಕಲ್ಪೋಕತಿ ಪೂಜೆ, ದೀಪಾರಾಧನೆ ಸಹಿತ ರಂಗಪೂಜೆ, ವಿಸರ್ಜನಾ ಪೂಜೆಯ ಬಳಿಕ ಶಾರದಾ ಮಾತೆ ಭವ್ಯ ವಿಸರ್ಜನಾ ಶೋಭಾಯಾತ್ರೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ್ ಬಿ.ಕೆ., ಮಾಧ್ಯಮ ಪ್ರತಿನಿಧಿ ಮಂಜುನಾಥ್ ಮಣಿಪಾಲ, ಸಮಿತಿ ಪ್ರಮುಖರಾದ ದೇವದಾಸ್ ಶೆಟ್ಟಿಗಾರ್ ಉಪಸ್ಥಿತರಿದ್ದರು.







