ಸಜಿಪಮುನ್ನೂರು: ಜಮಾಅತ್ ಅಂಗೀಕಾರ, ಖಾಝಿ ಸ್ವೀಕಾರ, ದಫನ ಭೂಮಿ ಸಮರ್ಪಣೆ ಕಾರ್ಯಕ್ರಮ

ವಿಟ್ಲ : ಜಾತ್ಯಾತೀತ ಭಾರತದಲ್ಲಿ ಬಹುಸಂಖ್ಯಾತರು-ಅಲ್ಪಸಂಖ್ಯಾತರು ಪರಸ್ಪರ ಹೊಂದಾಣಿಕೆಯಿಂದ ಜೀವಿಸಿದಾಗ ಮಾತ್ರ ಈ ದೇಶದ ಸುಂದರ ಇತಿಹಾಸ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳಬಹುದು. ದಕ್ಷಿಣ ಭಾರತಕ್ಕೆ ಪವಿತ್ರ ಇಸ್ಲಾಮನ್ನು ಪರಿಚಯಿಸಿದ ಮಾಲಿಕುದ್ದೀನಾರ್ ಸಹಿತ ಇಸ್ಲಾಮಿನ ಪೂರ್ವಿಕ ಮಹಾನುಭಾವರ ಉದ್ದೇಶವೂ ಅದೇ ಆಗಿತ್ತು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸಾರಿದರು.
ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿಯ ಖಾಝಿ ಸ್ವೀಕಾರ, ದಫನ ಭೂಮಿ ಸಮರ್ಪಣೆ ಹಾಗೂ ಸ್ವತಂತ್ರ ಜಮಾಅತ್ ಅಂಗೀಕಾರ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು ಪವಿತ್ರ ಇಸ್ಲಾಂ ಧರ್ಮದ ತತ್ವಾದರ್ಶಗಳು ವ್ಯಕ್ತಿಗಳ ಮನೋಭಾವಕ್ಕೆ ತಕ್ಕಂತೆ ಬದಲಾಯಿಸುವಂತದ್ದಲ್ಲ. ಇಸ್ಲಾಮಿನ ಎಲ್ಲಾ ತತ್ವಾದರ್ಶಗಳನ್ನು ಪೂರ್ವಿಕ ಮಹಾತ್ಮರು ಯಥಾವತ್ತಾಗಿ ಸಮುದಾಯಕ್ಕೆ ಅರ್ಪಿಸಿದ್ದಾರೆ. ಅದೇ ಅಡಿಸ್ಥಾನದಲ್ಲಿ ಸುನ್ನತ್ ಜಮಾತಿನ ಎಲ್ಲಾ ಜಮಾಅತ್‍ಗಳು ಒಗ್ಗೂಡಿ ಕಾರ್ಯಪ್ರವೃತ್ತರಾಗುವುದು ಅಗತ್ಯವಾಗಿದೆ ಎಂದರು.
ಸುನ್ನತ್ ಜಮಾಅತ್ ಆಶಯಾದರ್ಶಗಳಡಿಯಲ್ಲಿರುವ ಎಲ್ಲಾ ಜಮಾಅತ್‍ಗಳನ್ನು ಒಂದೇ ಸೂರಿನಡಿ ಒಂದುಗೂಡಿಸಲು ಸಮಸ್ತ ಜಂ-ಇಯ್ಯತುಲ್ ಉಲಮಾ ಈಗಾಗಲೇ ಸುನ್ನೀ ಮಹಲ್ಲ್ ಫೆಡರೇಶನ್ (ಎಸ್.ಎಂ.ಎಫ್.) ಎಂಬ ಸಂಘಟನೆಯನ್ನು ರೂಪೀಕರಿಸಲಾಗಿದೆ. ಸುನ್ನತ್ ಜಮಾಅತಿ ಆಶಯಾದರ್ಶಗಳನ್ನು ಅಂಗೀಕರಿಸುವ ಸರ್ವ ಜಮಾಅತ್‍ಗಳೂ ಕೂಡಾ ಈ ವೇದಿಕೆಯಡಿ ಒಗ್ಗೂಡಬೇಕು ಎಂದು ಖಾಝಿ ಕರೆ ನೀಡಿದರು.
ಮಲಾಯಿಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಬದ್ರುದ್ದೀನ್ ಅವರ ಮುಂದಾಳುತ್ವದಲ್ಲಿ ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಅವರು ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರನ್ನು ಮೊಹಲ್ಲಾ ಖಾಝಿಯಾಗಿ ಜಮಾಅತರ ಸಮ್ಮುಖದಲ್ಲಿ ಸ್ವೀಕರಿಸಲಾಯಿತು.
ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ದುವಾ ನೆರವೇರಿಸಿದರು. ಮಲಾಯಿಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಬದ್ರುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಸೀದಿ ಗೌರವಾಧ್ಯಕ್ಷ ಹಾಜಿ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಮಲಾಯಿಬೆಟ್ಟು ಎಂಜೆಎಂ ಖತೀಬ್ ಝುಬೈರ್ ಅಝ್‍ಹರಿ, ಕಾಶಿಪಟ್ಣ ದಾರುನ್ನೂರು ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ, ದಾರಿಮೀಸ್ ಜಿಲ್ಲಾಧ್ಯಕ್ಷ ಕೆ.ಬಿ. ಅಬ್ದುಲ್ ಖಾದಿರ್ ದಾರಿಮಿ, ಸಜಿಪ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಶರೀಫ್ ದಾರಿಮಿ, ಮದ್ರಸ ಮುಖ್ಯ ಶಿಕ್ಷಕ ಇಸ್ಮಾಯಿಲ್ ಮುಸ್ಲಿಯಾರ್, ಅಧ್ಯಾಪಕ ಹೈದರ್ ಅಲಿ ಮುಸ್ಲಿಯಾರ್, ಆಲಾಡಿ ಬಿಜೆಎಂ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ, ಕಾರ್ಯದರ್ಶಿ ಯೂಸುಫ್ ಆಲಾಡಿ, ಎಂಜೆಎಂ ಮಲಾಯಿಬೆಟ್ಟು ಮಾಜಿ ಅಧ್ಯಕ್ಷರುಗಳಾದ ಕೆ.ಎಂ. ಮುಹಮ್ಮದ್, ಅಹ್ಮದ್ ಬಾವಾ, ಅಬ್ದುಲ್ ಖಾದರ್ ಗುಂಡಿಕೆರೆ, ಸಜಿಪ ರೇಂಜ್ ಮದ್ರಸ ಮ್ಯಾನೇಜ್‍ಮೆಂಟ್ ಅಧ್ಯಕ್ಷ ಅಬ್ದುಲ್ ರಝಾಕ್, ಎಸ್ಕೆಎಸ್ಸೆಸ್ಸೆಫ್ ಆಲಾಡಿ ಶಾಖಾಧ್ಯಕ್ಷ ಯೂಸುಫ್ ಮಂಜಲ್ಪಾದೆ, ಎಸ್ಕೆಎಸ್ಸೆಸ್ಸೆಫ್ ಮಲಾಯಿಬೆಟ್ಟು ಶಾಖಾಧ್ಯಕ್ಷ ಇಕ್ಬಾಲ್ ಪಡ್ಪು, ಮಲಾಯಿಬೆಟ್ಟು ಅಲ್-ಅಮೀನ್ ಯಂಗ್‍ಮೆನ್ಸ್ ಅಧ್ಯಕ್ಷ ಚೆರಿಯೆ ಮೋನು ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮ ಸ್ವಾಗತ ಸಮಿತಿ ಅಧ್ಯಕ್ಷ ಯೂಸುಫ್ ಕರಂದಾಡಿ ಸ್ವಾಗತಿಸಿ, ಮಸೀದಿ ಕಾರ್ಯದರ್ಶಿ ಮುಹಮ್ಮದ್ ಶರೀಫ್ ವಂದಿಸಿದರು. ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರ್ವಹಿಸಿದರು.

















