ರೇಷ್ಮೆ ನೂಲು ಬಿಚ್ಚಾಣಿಕೆ ಘಟಕದಿಂದ ಮಗು ಸೇರಿ 6 ಜೀತ ಕಾರ್ಮಿಕರ ರಕ್ಷಣೆ

ಬೆಂಗಳೂರು, ಅ.4: ರಾಮನಗರದ ರೇಷ್ಮೆನೂಲು ಬಿಚ್ಚಾಣಿಕೆ ಘಟಕವೊಂದರಿಂದ 6 ಜೀತ ಕಾರ್ಮಿಕರು ಹಾಗೂ 4 ವರ್ಷದ ಮಗುವನ್ನು ರಕ್ಷಣೆ ಮಾಡಲಾಗಿದೆ.
ಐಜೆಎಂ ಸ್ವಯಂ ಸೇವಾ ಸಂಸ್ಥೆ ನೀಡಿದ ಮಾಹಿತಿಯನ್ನು ಆಧರಿಸಿ ರಾಮನಗರದ ಉಪವಿಭಾಗಾಧಿಕಾರಿ ತಹಶೀಲ್ದಾರ್, ಕಾರ್ಮಿಕ ಇಲಾಖೆ, ಪೊಲೀಸ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಗಣಿಗಾರಿಕೆ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಸೆ.30ರಂದು ರೇಷ್ಮೆನೂಲು ಬಿಚ್ಚಾಣಿಕೆ ಘಟಕವೊಂದರ ಮೇಲೆದಾಳಿ ನಡೆಸಿ, ಆರು ಜೀತ ಕಾರ್ಮಿಕರು ಹಾಗೂ 4 ವರ್ಷದ ಮಗುವನ್ನು ರಕ್ಷಣೆ ಮಾಡಿ ರೇಷ್ಮೆ ಘಟಕದ ಮಾಲಕರ ಮೇಲೆ ಪ್ರಕರಣದ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಜೀತದಿಂದ ಮುಕ್ತಿಗೊಂಡ ನಾಲ್ವರು ಪುರುಷರು ಹಾಗೂ ಇಬ್ಬರು ಗರ್ಭಿಣಿ ಮಹಿಳೆಯರಿದ್ದಾರೆ. ಇವರೆಲ್ಲರೂ 50ಸಾವಿರ ರೂ.ನಿಂದ 1.80ಲಕ್ಷ ರೂ.ವರೆಗೆ ಮುಂಗಡ ಹಣವನ್ನು ಪಡೆದುಕೊಂಡಿದ್ದರು. ಈ ಕಾರ್ಮಿಕರ ಪೈಕಿ ಕೆಲವರು 8 ವರ್ಷ ಹಾಗೂ ಕೆಲವರು 8 ತಿಂಗಳಿಂದ ರೇಷ್ಮೆ ಘಟಕದಲ್ಲಿ ಜೀತಗಾರರಾಗಿ ಕೆಲಸ ಮಾಡುತ್ತಿದ್ದರು. ಆರು ಕಾರ್ಮಿಕರ ಪೈಕಿ ನಾಲ್ಕು ಪುರುಷ ಕಾರ್ಮಿಕರಿಗೆ ದಿನವೊಂದಕ್ಕೆ 250ರೂ. ಹಾಗೂ ಇಬ್ಬರು ಮಹಿಳಾ ಕಾರ್ಮಿಕರಿಗೆ ಕೇವಲ 220ರೂ.ನೀಡಲಾಗುತಿತ್ತು ಎನ್ನಲಾಗಿದೆ.
ಇದು ಕರ್ನಾಟಕ ರಾಜ್ಯ ಸರಕಾರರದ ಕನಿಷ್ಠ ವೇತನ ಕಾಯ್ದೆಯ ಉಲ್ಲಂಘನೆಯಾಗಿದೆ. ಬಿಡುಗಡೆಗೊಂಡಿರುವ ಜೀತಕಾರ್ಮಿಕರು ರಾಮನಗರದಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರು ಹಾಗೂ ಪ್ರತಿದಿನ ಬೆಳಗ್ಗೆ 7.30ರಿಂದ ಸಂಜೆ 4ರವರೆಗೆ ಮಧ್ಯದಲ್ಲಿ ಕೇವಲ 30 ನಿಮಿಷಗಳ ಊಟದ ವಿರಾಮದೊಂದಿಗೆ ಕೆಲಸ ಮಾಡಬೇಕಾಗಿತ್ತು. ಎರಡು ವಾರಗಳಲ್ಲಿ ಒಂದು ಶುಕ್ರವಾರದಂದು ಕೇವಲ ಅರ್ಧದಿನ ಮಾತ್ರ ರಜೆ ನೀಡಲಾಗುತಿತ್ತು ಎಂದು ಪೊಲೀಸ್ ಅಧಿಕಾರಿಗಳ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.








