ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ: ನಾಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಸಭೆ
ಬೆಂಗಳೂರು, ಅ. 5: ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ಸಂಬಂಧ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಆ ಹಿನ್ನೆಲೆಯಲ್ಲಿ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸಲು ಹೈಕಮಾಂಡ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರನ್ನು ವೀಕ್ಷಕರನ್ನಾಗಿ ನೇಮಿಸಿದೆ. ಮಿಸ್ತ್ರಿ ಅವರು ಬೆಂಗಳೂರು ನಗರಕ್ಕೆ ಆಗಮಿಸಲಿದ್ದು ನಾಳೆ(ಅ.6) ಮಹತ್ವದ ಸಭೆ ನಡೆಸಲಿದ್ದಾರೆ.
ಅ.10ರಿಂದ ವಿಧಾನ ಮಂಡಲ ಅಧಿವೇಶನ ಆರಂಭಗೊಳ್ಳುತ್ತಿದ್ದು, ಆ ವೇಳೆಗೆ ಪ್ರತಿಪಕ್ಷ ನಾಯಕನ ಆಯ್ಕೆ ಆಗಬೇಕಿದೆ. ಕೇವಲ ನಾಲ್ಕು ದಿನಗಳು ಬಾಕಿ ಇದೆ. ಹೀಗಾಗಿ ಅಧಿಕೃತವಾಗಿ ವಿಪಕ್ಷ ನಾಯಕನ ಆಯ್ಕೆ ಸಂಬಂಧ ಶೀಘ್ರವೇ ನಿರ್ಧಾರ ಕೈಗೊಳ್ಳಬೇಕಿರುವ ಅನಿವಾರ್ಯತೆ ಇದೆ.
ಸಿದ್ದರಾಮಯ್ಯ ಅವರನ್ನು ವಿಪಕ್ಷ ನಾಯಕನನ್ನಾಗಿ ಮುಂದುವರೆಸಲು ಮೂಲ ಕಾಂಗ್ರೆಸಿಗರು ವಿರೋಧ ವ್ಯಕ್ತಪಡಿಸಿದ್ದು, ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಶಾಸಕರು ಸೇರಿದಂತೆ ಕೆಲವರು ಸಿದ್ದರಾಮಯ್ಯ ಅವರನ್ನೇ ವಿಪಕ್ಷ ನಾಯಕನಾಗಿ ಮುಂದವರೆಯಬೇಕೆಂದು ಪಟ್ಟು ಹಿಡಿದರೆ, ಮೂಲ ಕಾಂಗ್ರೆಸಿಗರಿಗೆ ಅವಕಾಶ ನೀಡಬೇಕೆಂದು ಕೆಲ ನಾಯಕರು ಒತ್ತಡ ಹೇರುತ್ತಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲೆ ಡಾ.ಜಿ.ಪರಮೇಶ್ವರ್ ಮತ್ತು ಎಚ್.ಕೆ. ಪಾಟೀಲ್ ಪ್ರತ್ಯೇಕವಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದು ಸಮಾಲೋಚನೆ ನಡೆಸಿದ್ದಾರೆ. ಹೀಗಾಗಿ ಪ್ರತಿಪಕ್ಷದ ನಾಯಕ ಯಾರೂ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ.
ಪ್ರತಿಸ್ಪರ್ಧಿ ಅಲ್ಲ..
‘ದಿಲ್ಲಿಗೆ ತೆರಳಿ ಹಿರಿಯ ಮುಖಂಡರನ್ನು ಭೇಟಿ ಮಾಡಿದ್ದೇನೆ. ನಾನೂ ಈ ಹಿಂದೆ ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ಮಧುಸೂದನ್ ಮಿಸ್ತ್ರಿ ಆಗಮಿಸಲಿದ್ದು, ವಿಪಕ್ಷ ನಾಯಕನ ಆಯ್ಕೆ ಸಂಬಂಧ ನಾಯಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಪಕ್ಷದಲ್ಲಿ ಮೂಲ-ವಲಸಿಗರೆಂಬ ಭೇದವಿಲ್ಲ. ವಿಪಕ್ಷ ನಾಯಕನ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುವೆ. ಆದರೆ, ನಾನು ಸಿದ್ದರಾಮಯ್ಯರ ಪ್ರತಿಸ್ಪರ್ಧಿಯಲ್ಲ’
-ಎಚ್.ಕೆ.ಪಾಟೀಲ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ