ಕಾಂಗ್ರೆಸ್ ಮುಖಂಡ ನೆಲ್ಲಿಕಟ್ಟೆ ಬಾಲಕೃಷ್ಣ ರೈ ನಿಧನ

ಪುತ್ತೂರು: ನಗರದ ನೆಲ್ಲಿಕಟ್ಟೆ ನಿವಾಸಿ, ಕಾಂಗ್ರೆಸ್ ಮುಖಂಡ ನೆಲ್ಲಿಕಟ್ಟೆ ಬಾಲಕೃಷ್ಣ ರೈ (62) ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಒಂದೂವರೆ ತಿಂಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಬಾಲಕೃಷ್ಣ ರೈ ಅವರು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಶುಕ್ರವಾರ ಮನೆಯಲ್ಲಿಯೇ ಇದ್ದ ಅವರು ಸಂಜೆ ವೇಳೆಗೆ ರಕ್ತದೊತ್ತಡ ಕಡಿಮೆಯಾಗಿ ಹಠಾತ್ ಅನಾರೋಗ್ಯ ಕ್ಕೊಳಗಾಗಿದ್ದರು. ಅವರನ್ನು ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಯ ಹಿನ್ನಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ಈ ಹಿಂದೆ ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಯಾಗಿದ್ದ ಅವರು ಕಳೆದ ಕೆಲವು ವರ್ಷಗಳಿಂದ ಪುತ್ತೂರಿನಲ್ಲಿ ಕಾಂಗ್ರೆಸ್ ಮುಖಂಡರಾಗಿ ಗುರುತಿಸಿಕೊಂಡು ಪಕ್ಷ ಸಂಘಟನೆಯಲ್ಲಿ ಸಕ್ರೀಯರಾಗಿದ್ದರು. ಎಲ್ಲರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಅವರು ಪುತ್ತೂರಿನಲ್ಲಿ ನೆಲ್ಲಿಕಟ್ಟೆ ಬಾಲಣ್ಣ ಎಂದೇ ಗುರುತಿಸಿಕೊಂಡಿದ್ದರು.
ಮೃತರು ಪತ್ನಿಯಾದ ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯೆ, ಪುತ್ತೂರು ಅಸಹಾಯಕರ ಸೇವಾ ಟ್ರಸ್ಟ್ ಹಾಗೂ ಒಡಿಯೂರು ವಜ್ರಮಾತ ಸಂಘಟನೆಯ ಪುತ್ತೂರು ಸಮಿತಿ ಸಮಿತಿಯ ಅಧ್ಯಕ್ಷೆಯಾಗಿದ್ದು, ವಿವಿಧ ಸಂಘಟನೆಗಳ ಪದಾಧಿಕಾರಿ ಯಾಗಿ ಗುರುತಿಸಿಕೊಂಡಿರುವ ನಯನಾ ರೈ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮೃತರ ಅಂತಿಮ ಕ್ರಿಯೆ ಶನಿವಾರ ನಡೆಸಲಾಯಿತು. ಮೃತರ ಮನೆಗೆ ಹಲವಾರು ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು.







