ಮತ್ಸಕ್ಷಾಮ: ದೈವದ ಮೊರೆ ಹೋದ ಪರ್ಸಿನ್ ಮೀನುಗಾರರು

ಉಡುಪಿ, ಅ.5: ಕಳೆದ ಎರಡು ಮೂರು ತಿಂಗಳುಗಳಿಂದ ಸಮುದ್ರದಲ್ಲಿ ಉಂಟಾಗಿರುವ ಮತ್ಸಕ್ಷಾಮದ ಹಿನ್ನೆಲೆಯಲ್ಲಿ ಮಲ್ಪೆ ಪರ್ಸಿನ್ ಮೀನುಗಾರರು ದೈವದ ಮೊರೆ ಹೋಗಿದ್ದು, ಇಂದು ಕಲ್ಮಾಡಿ ಬೊಬ್ಬರ್ಯ ದೈವಸ್ಥಾನದಲ್ಲಿ ಬೊಬ್ಬರ್ಯ ದರ್ಶನ ಸೇವೆಯನ್ನು ಸಲ್ಲಿಸಿದರು.
ಮಲ್ಪೆ ಪರ್ಸಿನ್ ಮೀನುಗಾರರ ಸಂಘದ ನೇತೃತ್ವದಲ್ಲಿ ನಡೆದ ಈ ವಿಶೇಷ ದರ್ಶನ ಸೇವೆಯಲ್ಲಿ ನೂರಾರು ಪರ್ಸಿನ್ ಮೀನುಗಾರರು ಪಾಲ್ಗೊಂಡಿದ್ದರು. ‘ಪರ್ಸಿನ್ ಮೀನುಗಾರರಿಗೆ ಬಹಳ ದೊಡ್ಡ ಸಮಸ್ಯೆ ಎದುರಾಗಿದೆ. ಕಳೆದ ಎರಡು ತಿಂಗಳುಗಳಿಂದ ಸಮುದ್ರದಲ್ಲಿ ಎಲ್ಲಿ ಹೋದರೂ ಮೀನುಗಳೇ ಸಿಗುತ್ತಿಲ್ಲ. ಕಾರವಾರ, ಮಂಗಳೂರು, ಕೇರಳ ಭಾಗದಲ್ಲೂ ಮೀನುಗಳು ಇಲ್ಲವಾಗಿದೆ. ಇದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ.’ ಎಂದು ಮಲ್ಪೆ ಪರ್ಸಿನ್ ಮೀನುಗಾರರ ಸಂಘದ ಉಪಾಧ್ಯಕ್ಷ ಚಂದ್ರ ಸಾಲ್ಯಾನ್ ತಿಳಿಸಿದರು.
ಸಂಪಾದನೆ ಇಲ್ಲದೆ ಹೊರರಾಜ್ಯದ ಕಾರ್ಮಿಕರು ಊರಿಗೆ ಮರಳಿದ್ದಾರೆ. ಹೀಗಾಗಿ ಶೇ.50ರಷ್ಟು ಪರ್ಸಿನ್ ಬೋಟುಗಳು ಬಂದರಿನಲ್ಲೇ ಲಂಗರು ಹಾಕಿವೆ. ಇದೀಗ ಬೇರೆ ದಾರಿ ಕಾಣದೆ ದೇವರ ಮೇಲೆ ನಂಬಿಕೆ ಇಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ನಮಗೆ ಕಷ್ಟ ಬಂದಾಗ ನಾವು ದೇವರ ಮೇಲೆ ನಂಬಿಕೆ ಇಡುತ್ತೇವೆ ಎಂದು ಅವರು ಹೇಳಿದರು.
ಮಲ್ಪೆ ಮೀನುಗಾರ ಕಾರ್ಮಿಕ ಸಂಘದ ಉಪಾಧ್ಯಕ್ಷ ರಮೇಶ್ ಮೆಂಡನ್, ಮೊದಲು ಪ್ರತಿ ಆಗಸ್ಟ್‌ನಿಂದ ನವೆಂಬರ್‌ವರೆಗೆ ಸಮುದ್ರ ತುಂಬಾ ತಂಪಾಗಿ ರುತ್ತಿತ್ತು. ಇದರಿಂದ ಎಲ್ಲ ಜಾತಿಯ ಮೀನುಗಳು ಮೇಲೆ ಬರುತ್ತಿದ್ದವು. ಹೀಗೆ ನಾವು ಮೀನುಗಳನ್ನು ನೋಡಿಯೇ ಬಲೆ ಹಾಕುತ್ತಿದ್ದೆವು. ಕಾಲಕ್ರಮೇಣ ಸಮುದ್ರದ ಉಷ್ಣಾಂಶ ಜಾಸ್ತಿಯಾಗುತ್ತ ಬರುತ್ತಿದ್ದು, ಮೀನುಗಳು ಈ ತಿಂಗಳಲ್ಲಿ ಕಣ್ಣಿಗೆ ಗೋಚರವಾಗುತ್ತಿಲ್ಲ ಎಂದರು.
ಈ ವರ್ಷ ಭಾರೀ ತೂಫಾನ್, ಮಳೆ, ನೆರೆ ಬಂದರೂ ಕೂಡ ಸಮುದ್ರದ ಮೇಲ್ಭಾಗ ತುಂಬಾ ಬಿಸಿಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಸಮುದ್ರ ದಲ್ಲಿ ಮೀನುಗಳು ಸಾಕಷ್ಟು ಇವೆ. ಆದರೆ ಸಮುದ್ರದ ಮೇಲ್ಭಾಗ ಬಿಸಿಯಾಗಿ ರುವುದರಿಂದ ಮೀನುಗಳು ತಳಭಾಗಕ್ಕೆ ಹೋಗಿರುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿ ಈವರೆಗೆ ಬಂದಿಲ್ಲ. ಉಷ್ಣಾಂಶದಿಂದ ಜನವರಿ -ಫೆಬ್ರವರಿಯಲ್ಲಿ ಆಗುವ ಸಮುದ್ರದ ನೀರಿನ ಬಣ್ಣ ಆಗಸ್ಟ್ ತಿಂಗಳಿನಲ್ಲೇ ಕಂಡುಬಂದಿದೆ. ಈಗ ನಮಗೆ ಮೀನು ಹೇರಳವಾಗಿ ಸಿಗುವ ಸಮಯ. ಇದೇ ಸಮಯದಲ್ಲಿ ಮೀನು ಸಿಗದಿದ್ದರೆ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅಳಲು ತೋಡಿ ಕೊಂಡರು.
ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಪರ್ಸಿನ್ ಸಂಘದ ಗೌರವಾಧ್ಯಕ್ಷ ಗುರುದಾಸ್ ಅಮೀನ್, ಕಾರ್ಯದರ್ಶಿ ಕೃಷ್ಣಯ್ಯ ಸುವರ್ಣ, ಸಂತೋಷ್ ಕೊಳ, ರಾಮ ಸುವರ್ಣ, ನವೀನ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಮಲ್ಪೆಯಲ್ಲಿ ಸುಮಾರು 140 ಪರ್ಸಿನ್ ಬೋಟುಗಳಿದ್ದು, ಒಂದರಲ್ಲಿ 30-40 ಮೀನುಗಾರರಂತೆ ಒಟ್ಟು 6000ಕ್ಕೂ ಅಧಿಕ ಮಂದಿ ಇದರಲ್ಲಿ ದುಡಿಯುತ್ತಿದ್ದಾರೆ. ಇದರಲ್ಲಿ ಒರಿಸ್ಸಾ, ಆಂಧ್ರಪ್ರದೇಶ ಸೇರಿದಂತೆ ಹೊರರಾಜ್ಯದ ಕಾರ್ಮಿಕರು ಕೂಡ ಇದ್ದಾರೆ. ಪರ್ಸಿನ್ ಬೋಟು ಸಮುದ್ರದ 120 ಮೀಟರ್ ಆಳದವರೆಗೆ ತೆರಳಿ ಮೀನುಗಾರಿಕೆ ನಡೆಸುತ್ತದೆ. ಸಾಲ ಮಾಡಿ ದುಡಿಯುತ್ತಿದ್ದೇವೆ. ದುಡಿಮೆ ಇಲ್ಲದೆ ಸಾಲ ಕಟ್ಟಲು ಸಾಧ್ಯ ವಾಗುತ್ತಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಆದುದರಿಂದ ನಮ್ಮ ಕಷ್ಟಕ್ಕೆ ಸರಕಾರ ಸ್ಪಂದಿಸಬೇಕು. ಮಾನವೀಯತೆ ದೃಷ್ಠಿಯಿಂದ ರೈತರಿಗೆ ನೀಡುವ ರೀತಿಯಲ್ಲಿ ಪರಿಹಾರವನ್ನು ಮೀನುಗಾರರಿಗೆ ನೀಡಬೇಕು ಎಂದು ಮಲ್ಪೆ ಪರ್ಸಿನ್ ಮೀನುಗಾರರ ಸಂಘದ ಉಪಾಧ್ಯಕ್ಷ ಚಂದ್ರ ಸಾಲ್ಯಾನ್ ಒತ್ತಾಯಿಸಿದರು.







