ರಸ್ತೆ ಗುಂಡಿ ಮುಚ್ಚುವ ಕೇಜ್ರಿವಾಲ್ ಅಭಿಯಾನವನ್ನು ಹಾಡಿನ ಮೂಲಕ ಕುಟುಕಿದ ಗಂಭೀರ್

ಹೊಸದಿಲ್ಲಿ, ಅ.5: ದಿಲ್ಲಿಯ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರಂಭಿಸಿರುವ ಹೊಸ ಅಭಿಯಾನದ ಬಗ್ಗೆ ಬಿಜೆಪಿ ಸಂಸದ ಗೌತಮ್ ಗಂಭೀರ್ ಹಳೆ ಹಿಂದಿ ಹಾಡಿನ ಮೂಲಕ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಗಂಭೀರ್, ಗೀತಾ ದತ್ತ್ ಅವರ 1954ರ ಬಾಬೂಜಿ ಧೀರೆ ಚಲ್ನಾ.....(ಗೌರವಾನ್ವಿತರೇ ಸ್ವಲ್ಪ ನಿಧಾನವಾಗಿ ಚಲಿಸಿ...) ಎಂಬ ಜನಪ್ರಿಯ ಹಾಡನ್ನು ಉಲ್ಲೇಖಿಸಿದ್ದಾರೆ.
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಕೇಜ್ರಿವಾಲ್, ದಿಲ್ಲಿಯ ಕೆಲವು ರಸ್ತೆಗಳು ದಿಲ್ಲಿ ಸರಕಾರದ ಸಾರ್ವಜನಿಕ ಕಲ್ಯಾಣ ಇಲಾಖೆಯಡಿ ಬರುತ್ತದೆ. ಆದರೆ ಈ ರಸ್ತೆಗಳ ಮೇಲೆ ಪ್ರತಿದಿನ ಲಕ್ಷಾಂತರ ವಾಹನಗಳು ಓಡಾಡುತ್ತವೆ. ಮಳೆಯಿಂದ ಈ ರಸ್ತೆಗಳ ಮೇಲೆ ಹೊಂಡಗಳು ಸೃಷ್ಟಿಯಾಗಿ ಜನರಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ವಿನೂತನ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದರು.
ಈ ಅಭಿಯಾನದಡಿ ಆಮ್ ಆದ್ಮಿ ಪಕ್ಷದ 50 ಶಾಸಕರಲ್ಲಿ ಪ್ರತಿಯೊಬ್ಬರು ಸರಕಾರಕ್ಕೆ ಸೇರಿದ ರಸ್ತೆಗಳ 20-25 ಕಿ.ಮೀ ವ್ಯಾಪ್ತಿ ದೂರದವರೆಗೆ ಪರಿಶೀಲನೆ ನಡೆಸಲಿದ್ದಾರೆ ಮತ್ತು ಈ ಕಾರ್ಯದಲ್ಲಿ ಅವರನ್ನು ಪಿಡಬ್ಲೂಡಿ ಇಂಜಿನಿಯರ್‌ಗಳು ಜೊತೆಯಾಗಿಲಿದ್ದಾರೆ. ಶಾಸಕರು ಹೊಂಡಗಳ ಫೋಟೊ ತೆಗೆದು ಅದು ಇರುವ ಜಾಗದ ಮಾಹಿತಿಯನ್ನು ಮತ್ತು ವಿವರವನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.





