ಅವೈಜ್ಞಾನಿಕ ಮೀನುಗಾರಿಕೆ ವಿರುದ್ದ ಕ್ರಮಕ್ಕೆ ವಾರದ ಗಡುವು: ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘ ಎಚ್ಚರಿಕೆ
ಉಡುಪಿ, ಅ.5: ಅವೈಜ್ಞಾನಿಕ ಮೀನುಗಾರಿಕೆ ನಡೆಸುತ್ತಿರುವ ಬುಲ್‌ಟ್ರಾಲ್ ವಿರುದ್ಧ ವಾರದೊಳಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರಗಿಸದಿದ್ದರೆ ಮುಂದೆ ಉಗ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘ ಎಚ್ಚರಿಕೆ ನೀಡಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ, ಬುಲ್‌ಟ್ರಾಲ್ ಮೀನುಗಾರಿಕೆಗೆ ನಿಷೇಧ ಇದ್ದರೂ ಬಲಾತ್ಕಾರವಾಗಿ ನಡೆಸು ತ್ತಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ, ಶಾಸಕರು, ಸಚಿವರನ್ನು ಭೇಟಿಯಾದರೂ ಭರವಸೆಯನ್ನು ಮಾತ್ರ ನೀಡುತ್ತಿದ್ದಾರೆ. ಈವರೆಗೆ ಯಾವುದೇ ಕಾನೂನು ಕ್ರಮ ಜರಗಿಸಿಲ್ಲ ಎಂದು ದೂರಿದರು.
ಇವರ ಭರವಸೆಗಳ ಮಧ್ಯೆ ಈಗಾಗಲೇ ಒಂದೂವರೆ ತಿಂಗಳು ಬುಲ್ ಟ್ರಾಲ್ ಮೀನುಗಾರಿಕೆ ನಡೆಸಲಾಗಿದೆ. ಸುಮಾರು 450 ಬೋಟುಗಳಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆ ಮಾಡಲಾಗುತ್ತಿದೆ. ಇದರಿಂದ ಸಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ದೊಡ್ಡ ಹೊಡೆತ ಬಿದ್ದಿದೆ. ಜಿಲ್ಲೆಯಲ್ಲಿ ಸುಮಾರು 5000 ನಾಡದೋಣಿಗಳಿದ್ದು, ಇದನ್ನು 50000ಮಂದಿ ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದರು.
ಸರಕಾರ ಹಾಗೂ ಜಿಲ್ಲಾಡಳಿತ ನಮ್ಮ ಮನವಿಗೆ ಸ್ಪಂದಿಸಿ ಅವೈಜ್ಞಾನಿಕ ಬುಲ್ ಟ್ರಾಲ್ ಮೀನುಗಾರಿಕೆ ವಿರುದ್ಧ ಕ್ರಮ ಜರಗಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿ ಕಾರಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಪೆ ಸಂಘದ ಅಧ್ಯಕ್ಷ ಚಂದ್ರಕಾಂತ್ ಕರ್ಕೇರ, ಗಂಗೊಳ್ಳಿ ವಲಯ ಅಧ್ಯಕ್ಷ ಮಂಜು ಬಿಲ್ಲವ, ಮುಖಂಡರಾದ ಸುರೇಶ್ ಖಾರ್ವಿ, ರತ್ನಾಕರ ಮೆಂಡನ್, ವಾಸು ಕರ್ಕೇರ, ಪ್ರವೀಣ್ ಶ್ರೀಯಾನ್, ಹರೀಶ್ ತಿಂಗಳಾಯ, ಲಕ್ಷ್ಮೀನಾರಾಯಣ ಮೊದಲಾದವರು ಹಾಜರಿದ್ದರು.







