ತೋಡಾರು : ಯೆನೆಪೊಯ ಕಾಲೇಜಿನಲ್ಲಿ 175 ಮಂದಿಗೆ ಪದವಿ ಪ್ರದಾನ

ಮೂಡುಬಿದಿರೆ : ತೋಡಾರಿನಲ್ಲಿರುವ ಯೆನೆಪೋಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿವಿಧ ವಿಭಾಗಗಳ 175 ಮಂದಿಗೆ ಪದವಿ ಪ್ರದಾನ ಸಮಾರಂಭ ಶನಿವಾರ ನಡೆಯಿತು.
ಮಣಿಪಾಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಡಾ/ ಡಿ.ಶ್ರೀಕಾಂತ್ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರದಾನಗೈದು ಮಾತನಾಡಿ ಎಂಜಿನಿಯರ್ ಶಿಕ್ಷಣ ಪಡೆದಿರುವ ಪದವೀಧರರಿಗೆ ಉತ್ತಮ ಭವಿಷ್ಯವಿದೆ. ಸಿಗುವ ಕೆಲವೊಂದು ಉದ್ಯೋಗಗಳಲ್ಲಿ ನಿಮಗೆ ತೃಪ್ತಿ ಇಲ್ಲದಿರಬಹುದು ಆದರೆ ನೀವು ಮಾಡುವ ಕೆಲಸಗಳ ಬಗ್ಗೆ ನಿಮಗೆ ತಿಳಿದಿರಬೇಕು ಆಗ ನಿಮಗೆ ತೃಪ್ತಿ ಸಿಗುತ್ತದೆ. ನಿಮಗೆ ಸಿಗುವ ಉದ್ಯೋಗಗಳ ಬಗ್ಗೆ ನಿರ್ಲಕ್ಷ್ಯ ಮಾಡದೆ ಅನುಭವಿಸಿ ಮಾಡಿದಾಗ ಯಶಸ್ಸನ್ನು ಸಾಧಿಸಲು ಸಾಧ್ಯವಿದೆ ಎಂದು ಹೇಳಿದರು.
ಯೆನೆಪೋಯ ವಿವಿಯ ಕುಲಪತಿ ಯೆನೆಪೋಯ ಅಬ್ದುಲ್ಲಾ ಕುಂಞ ಅಧ್ಯಕ್ಷತೆಯನ್ನು ವಹಿಸಿದ್ದರು. ಯೆನೆಪೋಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಅಖ್ತರ್ ಹುಸೇನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹೆಚ್.ಓ.ಡಿಗಳಾದ ಪಾಂಡು ನಾಯಕ್, ಗುರು ಪ್ರಸಾದ್, ಗಂಗಾಧರ್, ಸತೀಶ್ ಮತ್ತು ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.
ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಾದ ಭವ್ಯ ಬಾಬುರಾಜ್ ಸಿ.ವಿ, ಪ್ರಸನ್ನ ಕುಮಾರ್, ಪ್ರಸನ್ನ ಹೆಚ್.ಎಸ್, ಫಾತಿಮಾ ಅಫ್ರೀನ್ ಹಾಗೂ ನಾಗೇಶ್ ಅವರನ್ನು ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಆರ್.ಜಿ.ಡಿಸೋಜಾ ಸ್ವಾಗತಿಸಿ ಪ್ರತಿಜ್ಞಾವಿಧಿ ಬೋಧಿಸಿದರು. ಸಹಾಯಕ ಪ್ರಾಧ್ಯಾಪಕ ವೆಂಕಟೇಶ್ ಅತಿಥಿಯನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕರಾದ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕೆವಿನ್ ಡಿ"ಸೋಜಾ ವಂದಿಸಿದರು.







