ವೃತ್ತಿಯ ಬಗ್ಗೆ ಪ್ರೀತಿ ಭರಿತ ಭಕ್ತಿ ಇರಲಿ: ಡಾ. ವಾಸುದೇವ ಕಾಮತ್

ಉಪ್ಪಿನಂಗಡಿ: ಜೀವನೋಪಾಯಕ್ಕಾಗಿ ಆಯ್ಕೆ ಮಾಡಿಕೊಂಡ ವೃತ್ತಿಯ ಬಗ್ಗೆ ಪ್ರೀತಿ ಭರಿತ ಭಕ್ತಿ ಇರಬೇಕು. ಸಮರ್ಪಣಾ ಭಾವದಿಂದ ಉತ್ಕೃಷ್ಠ ಸಾಧನೆಯನ್ನು ಸಾಧಿಸಬೇಕು. ಈ ಮೂಲಕ ಸಮಾಜದಲ್ಲಿ ಗುರುತಿಸಲ್ಪಡುವಂತವರಾಗಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖಾ ಉಪ ನಿರ್ದೇಶಕ ಡಾ. ವಾಸುದೇವ ಕಾಮತ್ ಕರೆ ನೀಡಿದರು.
ಶನಿವಾರ ನಡೆದ ಇಲ್ಲಿನ ಇಂದ್ರಪ್ರಸ್ಥ ಪಿಯು ಕಾಲೇಜಿನ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ವಿಶ್ವದಲ್ಲಿ ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದರೂ, ಉತ್ತೀರ್ಣತೆಯ ಅಂಕ ಮಾತ್ರ ಶೇ. 35 ಹಾಗೆಯೇ ಉಳಿದಿದೆ. ಒಂದು ವಿದ್ಯಾರ್ಥಿಗೆ ವರ್ಷವಿಡೀ ಪಾಠ ಮಾಡುವ ಶಿಕ್ಷಕನಿಗೆ ವಿದ್ಯಾರ್ಥಿಯನ್ನು ಶೇ.35 ಅಂಕ ಗಳಿಸಲು ಸಾಧ್ಯವಾಗಿಸದಿದ್ದರೆ ಅದು ಶಿಕ್ಷಕ ಅಥವಾ ಉಪನ್ಯಾಸಕನ ದೌರ್ಬಲ್ಯತೆಯಾಗುವುದು ಎಂದು ವಿಶ್ಲೇಷಿಸಿದ ಅವರು, ಜೀವನದಲ್ಲಿ ಅಂಕವೇ ಪ್ರಧಾನವಲ್ಲ. ಆದರೆ ಅಂಕಕ್ಕೆ ಹೆಚ್ಚಿನ ಮಾನ್ಯತೆ ಇದೆ. ಬದುಕಿಗೆ ಆತ್ಮವಿಶ್ವಾಸವನ್ನು ಮೂಡಿಸುವ ಶಕ್ತಿ ಅಂಕಕ್ಕೆ ಇದೆ. ಆದ್ದರಿಂದ ಆತ್ಮವಿಶ್ವಾಸ ಮತ್ತು ಮುನ್ನುಗ್ಗುವ ಮನೋಭಾವದಿಂದ ವಿದ್ಯಾರ್ಥಿ ಜೀವನದಲ್ಲಿ ಕ್ರಿಯಾಶೀಲರಾದರೆ ಯಶಸ್ಸು ಸಾಧ್ಯವೆಂದರಲ್ಲದೆ, ಹೆತ್ತವರು ಮಕ್ಕಳ ಆಸಕ್ತಿಯನ್ನು ಗುರುತಿಸಿ ಅವರವರ ಅಭಿಷ್ಠೆಯಂತೆ ಸಾಧನೆ ತೋರಲು ಪ್ರೇರಣೆ ನೀಡಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಳಿಕೆ ಸತ್ಯ ಸಾಯಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿದ್ದರಾಜು ಮಾತನಾಡಿ, ವಿದ್ಯಾರ್ಥಿ ಯೋರ್ವನ ಯಶಸ್ಸಿನಲ್ಲಿ ಪಠ್ಯದ ಪ್ರಭಾವ ಹತ್ತರಿಂದ ಮೂವತ್ತು ಶೇಕಡಾ ಇದ್ದರೆ, ಸ್ವ ಪ್ರಯತ್ನ ಮೂವತ್ತರಿಂದ ಅರುವತ್ತು ಶೇಕಡಾ ಇರುವುದು. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವಿಭಿನ್ನತೆಯಿಂದ ಕೂಡಿದ್ದು, ಅವರವರ ಅಗತ್ಯಕ್ಕೆ ತಕ್ಕಂತೆ ಕಲಿಸುವ ಕಲೆಯನ್ನು ಶಿಕ್ಷಕರು ಹಾಗೂ ಉಪನ್ಯಾಸಕರು ಹೊಂದಿರಬೇಕೆಂದರು.
ಇಂದ್ರಪ್ರಸ್ಥ ಪಿಯು ಕಾಲೇಜಿನ ಸಂಚಾಲಕ ಯುಎಸ್‍ಎ ನಾಯಕ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಎದುರಿಸಬೇಕೆಂದು ಹಲವಾರು ಯೋಜನೆಗಳನ್ನು ಇಂದ್ರಪ್ರಸ್ಥದಲ್ಲಿ ಅನುಷ್ಠಾನಿಸಲಾಗಿದ್ದು, ಇದರ ಸದುಪಯೋಗವನ್ನು ಪಡೆಯಲು ವಿದ್ಯಾರ್ಥಿಗಳು ಆಸಕ್ತಿದಾಯಕವಾಗಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ಪಿಯು ಕಾಲೇಜು ವಿಭಾಗದ ಪ್ರಾಂಶುಪಾಲ ಎಚ್.ಕೆ. ಪ್ರಕಾಶ್ ವರದಿ ವಾಚಿಸಿದರು. ಇಂದ್ರಪ್ರಸ್ಥ ವಿದ್ಯಾಲಯದ ಪ್ರಾಂಶುಪಾಲ ಎಂ.ಕೆ. ಜೋಸ್ ಸ್ವಾಗತಿಸಿದರು. ವಿದ್ಯಾರ್ಥಿ ಚೇತನ್ ವಂದಿಸಿದರು. ಉಪನ್ಯಾಸಕಿಯರಾದ ಸುಪ್ರಿಯ ಹಾಗೂ ಶಿಲ್ಪಾರವರು ಕಾರ್ಯಕ್ರಮ ನಿರೂಪಿಸಿದರು.







