ಜೈವಿಕ ಇಂಧನ ಘಟಕ ಸ್ಥಾಪಿಸಲು ಚರ್ಚೆ: ಮೇಯರ್ ಗೌತಮ್ ಕುಮಾರ್

ಬೆಂಗಳೂರು, ಅ.5: ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವಾರ್ಡ್ ಮಟ್ಟದಲ್ಲಿ ಜೈವಿಕ ಇಂಧನ ಘಟಕ ಅಥವಾ ವೇಸ್ಟ್ ಪವರ್ ಎನರ್ಜಿ ಪ್ಲಾಂಟ್ ಸ್ಥಾಪಿಸಲು ಚರ್ಚೆ ನಡೆಸಲಾಗುತ್ತಿದೆ ಎಂದು ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.
ಶನಿವಾರ ನಗರದ ಮಿಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ 50 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಸಿರಿಕೊಂಡು ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಪ್ರಸ್ತುತ ಬೆಳ್ಳಳ್ಳಿ ಕ್ವಾರಿಗೆ ಕಸ ರವಾನೆಯಾಗುತ್ತಿದ್ದು, ಕೆಲವೇ ದಿನಗಳಲ್ಲಿ ಭರ್ತಿಯಾಗಲಿದೆ. ಮಿಟಗಾನಹಳ್ಳಿ ಕ್ವಾರಿಗೆ ಹಾಕುತ್ತಿರುವುದರಿಂದ ಇನ್ನು ಎರಡು ವರ್ಷ ಕಸ ವಿಲೇವಾರಿಗೆ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ, ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜೈವಿಕ ಇಂಧನ ಘಟಕ ಸ್ಥಾಪನೆಗೆ ಮುಂದಾಗಿದ್ದೇವೆ ಎಂದರು.
ಈ ಸಂಬಂಧ ಸಿಪಿಆರ್‌ಐ ಹಾಗೂ ಐಐಬಿಎಂನವರು ತಮ್ಮ ಜಾಗದಲ್ಲಿಯೇ ಕಸದಿಂದ ಜೈವಿಕ ಇಂದನ ಉತ್ಪನ್ನ ಮಾಡುತ್ತಿದ್ದಾರೆ. ಹಾಗಾಗಿ ತ್ಯಾಜ್ಯ ಇಲ್ಲ. ಅದೇ ರೀತಿ ನಾವು ಜೈವಿಕ ಇಂಧನ ಉತ್ಪನ್ನವನ್ನು ವಾರ್ಡ್ ಮಟ್ಟದಲ್ಲಿ ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದು ಗೌತಮ್ ಕುಮಾರ್ ಮಾಹಿತಿ ನೀಡಿದರು.
ದಿಲ್ಲಿ ಮಾದರಿಯಲ್ಲಿ ವೇಸ್ಟ್ ಪವರ್ ಎನರ್ಜಿ ಫ್ಲಾಂಟ್ ಅನ್ನು ಇದರ ಜತೆಗೆ ಸ್ಥಾಪಿಸುವ ಕುರಿತು ಚಿಂತನೆ ನಡೆದಿದೆ. ಒಟ್ಟಾರೆ ನಗರದ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಾಲಿಕೆಯು ಸಂಪೂರ್ಣವಾಗಿ ಕಾರ್ಯಮಗ್ನವಾಗಿದೆ ಎಂದು ಅವರು ನುಡಿದರು.
ಕಸ ವಿಲೇವಾರಿ ಸಂಬಂಧ ಕಸ ಸಾಗಿಸಲು ಒಂದು ತಿಂಗಳಿಗೆ ಒಂದು ಕಾಂಪ್ಯಾಕ್ಟರ್‌ಗೆ ಎರಡೂವರೆ ಲಕ್ಷ ಖರ್ಚು ಆಗುತ್ತಿದೆ. 286 ಕಾಂಪ್ಯಾಕ್ಟರ್‌ಗಳಲ್ಲಿ ಸಾಗಾಣೆ ಮಾಡುತ್ತಿದ್ದು, ಇದರಿಂದ ಅತಿ ಹೆಚ್ಚು ಖರ್ಚಾಗುತ್ತಿದೆ. ಆದುದರಿಂದಾಗಿ ವಾರ್ಡ್ ಮಟ್ಟದಲ್ಲಿ ಜೈವಿಕ ಇಂಧನ ಘಟಕ ಹಾಗೂ ವೇಸ್ಟ್ ಪವರ್ ಎನರ್ಜಿ ಫ್ಲಾಂಟ್ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಉಪ ನೋಂದಾಣಾಧಿಕಾರಿಗಳ ಕಚೇರಿಯಲ್ಲಿ ಕಸದ ಸೆಸ್ ಶೇ.1 ರಷ್ಟು ಸಂಗ್ರಹವಾಗಬೇಕಿದೆ. ಆದರೆ, ಇಷ್ಟು ಸಂಗ್ರಹಗೊಂಡಿಲ್ಲ ಎಂದ ಅವರು, ಈ ಕುರಿತು ಕಂದಾಯ ಸಚಿವ ಆರ್.ಅಶೋಕ್‌ರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಗೌತಮ್ ಕುಮಾರ್ ತಿಳಿಸಿದರು.







