Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಹೆಲ್ಲರೊ-ಮಹಿಳಾ ವಿಮೋಚನೆಯ ರೊಮ್ಯಾಂಟಿಕ್...

ಹೆಲ್ಲರೊ-ಮಹಿಳಾ ವಿಮೋಚನೆಯ ರೊಮ್ಯಾಂಟಿಕ್ ಹಾದಿ

ಕೆ. ಪುಟ್ಟಸ್ವಾಮಿಕೆ. ಪುಟ್ಟಸ್ವಾಮಿ6 Oct 2019 12:11 AM IST
share
ಹೆಲ್ಲರೊ-ಮಹಿಳಾ ವಿಮೋಚನೆಯ  ರೊಮ್ಯಾಂಟಿಕ್ ಹಾದಿ

ಪ್ರೇಕ್ಷಕರನ್ನು ಭಾವನಾತ್ಮಕ ಯಾನದಲ್ಲಿ ಕರೆದೊಯ್ಯುವ ಮೂಲಕ ಸಾಮಾಜಿಕ ಪರಿವರ್ತನೆಯ ಸಾಧ್ಯತೆಯನ್ನು ಮುಟ್ಟಿಸುವ ರಮ್ಯಮಾರ್ಗಕ್ಕೆ ನೃತ್ಯ-ಸಂಗೀತ ಬಳಸುವುದು ಭಾರತೀಯ ಚಿತ್ರರಂಗದಲ್ಲಿ ಮೊದಲಿನಿಂದಲೂ ಒಂದು ಪಂಥವಾಗಿ ಬಂದಿದೆ. ಆದರೆ ವಿಮರ್ಶಕರ ಒಂದು ವರ್ಗ ಇದನ್ನು ಕಟುವಾಗಿ ವಿಮರ್ಶಿಸಿ ಅದೊಂದು ನಯವಂಚನೆಯ ವಿಧಾನವೆಂದು ಟೀಕಿಸುತ್ತಾರೆ. ಆದರೆ ರೊಮ್ಯಾಂಟಿಕ್ ಕಲ್ಪನೆಯ ಪರವಾದ ವಿಮರ್ಶಕರು, ಹೆಚ್ಚು ಸಂಘರ್ಷವಿಲ್ಲದ ಸೌಂದರ್ಯಾತ್ಮಕವಾದ ಹಾಗೂ ಹಿಂಸಾಮುಕ್ತವಾದ ಅಪೇಕ್ಷಣೀಯ ಮಾರ್ಗವಿದೆಂದು ನಂಬುತ್ತಾರೆ. ಮನೋರಂಜನೆಯ ಜೊತೆಯಲ್ಲಿಯೇ ಮನೋವಿಕಾಸವನ್ನು ಬೆಸೆಯುವ ಮಾರ್ಗವೆಂದು ತರ್ಕಿಸುತ್ತಾರೆ. ಹೆಲ್ಲರೊ ಅಂತಹ ಎರಡನೆಯ ಮಾರ್ಗಕ್ಕೆ ಸೇರಿದ ಚಿತ್ರ.

2018ನೇ ಸಾಲಿನ ರಾಷ್ಟ್ರೀಯ ಪುರಸ್ಕಾರ ಪಟ್ಟಿಯಲ್ಲಿ ಅತ್ಯುತ್ತಮ ಚಿತ್ರವಾಗಿ ಗುಜರಾತಿ ಭಾಷೆಯ ‘ಹೆಲ್ಲರೊ’ ಆಯ್ಕೆಯಾದದ್ದು ಸಿನೆಮಾ ಆಸಕ್ತರಲ್ಲಿ ಸಂಶಯ ಮೂಡಿದ್ದು ಸಹಜವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸ್ಥಾಪನೆಯಾದ ‘ಸಿನೆಮಾಸ್ನೇಹಿ ರಾಜ್ಯ’ ಪ್ರಶಸ್ತಿಗೆ ಮೊದಲ ಬಾರಿಗೆ ಗುಜರಾತ್(2015) ನಂತರ ಉತ್ತರ ಪ್ರದೇಶ(2016), ಮಧ್ಯಪ್ರದೇಶ(2017) ಮತ್ತು ಉತ್ತರಾಖಂಡ (2018) ರಾಜ್ಯಗಳು ಆಯ್ಕೆಯಾದಾಗ, ಪ್ರಶಸ್ತಿಯು ಉತ್ತರ ಭಾರತ ಪ್ರವಾಸ ಮಾಡುತ್ತಿರುವುದು ಸ್ಪಷ್ಟವಾಗಿತ್ತು. ಇವು ಯಾವ ರಾಜ್ಯಗಳಲ್ಲಿಯೂ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ, ಪ್ರದರ್ಶನ ಕಾಣುವುದೇ ಇಲ್ಲ! ಹಾಗಾಗಿ ಎಲ್ಲರೂ ಕೂಡ ಅಂತಹ ಪಕ್ಷಪಾತ ಪ್ರಶಸ್ತಿಗೆ ಭಾಜನವಾಗಿರಬಹುದು ಎಂದು ಭಾವಿಸಿದ್ದಲ್ಲಿ ಸಹಜವೇ ಆಗಿತ್ತು. ಗುಜರಾತಿ ಭಾಷೆಯ ಚಲನಚಿತ್ರಗಳು ಈವರೆಗೆ ಎಲ್ಲೊ ಕೆಲವು ಬಾರಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಗಳಿಸಿದ್ದು ಬಿಟ್ಟರೆ ಭಾರತೀಯ ಸಿನೆಮಾ ಸಂದರ್ಭದ ಚರ್ಚೆಯಲ್ಲಿ ಉಲ್ಲೇಖಗೊಂಡಿರುವುದೇ ವಿರಳ.

ಆದರೆ ’ಹೆಲ್ಲರೊ’ ಚಿತ್ರವನ್ನು ವೀಕ್ಷಿಸಿದಾಗ ಎದ್ದ ಸಂಶಯಗಳು ನಿರಾಧಾರವೆನಿಸಿದವು. ಪುರುಷ ಪ್ರಧಾನ ಸಮಾಜದ ಕಟ್ಟಳೆಗಳಿಂದ ಬಿಡುಗಡೆಯ ಹಾದಿ ಕಂಡುಕೊಳ್ಳುವ ಸ್ತ್ರೀಸಮೂಹದ ಪ್ರಯತ್ನವನ್ನು ಕಣ್ಣು ಮತ್ತು ಕಿವಿಗೆ ಆನಂದದಾಯಕವಾಗಿ ಮುಟ್ಟುವಂತೆ, ಮನಸ್ಸು ಆರ್ದ್ರಗೊಳ್ಳುವಂತೆ ರೂಪಿಸಿರುವ ಈ ಕೃತಿಯು ತನ್ನ ಮಿತಿಗಳ ನಡುವೆಯೂ ಗಮನ ಸೆಳೆಯುತ್ತದೆ.

 ಇದು ಗುಜರಾತಿನ ಜನಪದ ಕತೆಯೊಂದನ್ನು ಆಧರಿಸಿದ 1975ರ ಅವಧಿಗೆ ಹೊಂದಿಸಿ ಹೆಣೆದ ಕಥೆಯ ಸಿನೆಮಾ. ಕಥೆ ನಡೆಯುವುದು ಗುಜರಾತ್‌ನ ಮರುಭೂಮಿ ವಲಯವೆನಿಸಿದ ರಾಣ್ ಆಫ್ ಕಛ್‌ನ ಬಯಲೊಂದರ ಹೆಸರಿಲ್ಲದ ಹಳ್ಳಿಯಲ್ಲಿ. ಗುಡಾರಗಳಂತೆ ಎದ್ದ ಹುಲ್ಲು-ಕಟ್ಟಿಗೆಯ ಮನೆಗಳ ಸಮೂಹ. ಕಣ್ಣಿಗೆ ಕಾಣುವಷ್ಟು ದೂರ ಮರಳು ಭೂಮಿ. ಬಿಸಿಯ ಗಾಳಿ. ಚಲಿಸುವ ಧೂಳು. ಇಂತಹ ಶುಷ್ಕ ಭಿತ್ತಿಯಲ್ಲಿ ಬಗೆಬಗೆಯ ಬಣ್ಣದ ಬಟ್ಟೆಗಳನ್ನು ಧರಿಸಿದ ಗಂಡು-ಹೆಣ್ಣುಗಳು ಕಣ್ಣಿಗೆ ತಂಪನ್ನೆೆರೆಯುತ್ತಾರೆ. ಆದರೆ ಅದೊಂದು ಪುರುಷ ಅಹಂಕಾರ ತುಂಬಿಕೊಂಡಿರುವ ಸಮಾಜ. ಮಹಿಳೆಯರದು ಸಂಪೂರ್ಣ ಪರಾಧೀನ ಪ್ರಪಂಚ. ಸಣ್ಣ ವಯಸ್ಸಿನ ಬಾಲೆಯರಿಗೂ ಬಂಧನ ತಪ್ಪಿದ್ದಲ್ಲ. ಪುರುಷ ಸಮಾಜ ವಿಧಿಸಿದ ಕಟ್ಟುಪಾಡನ್ನು ಸ್ವಲ್ಪವೇ ಉಲ್ಲಂಘಿಸಿದರೂ ಸಂಬಂಧಿಸಿದ ಸಂಸಾರಕ್ಕೆ, ಊರಿಗೆ ಕೇಡು ತಪ್ಪಿದ್ದಲ್ಲವೆಂಬ ಭಾವನೆ ಗಟ್ಟಿಯಾಗಿದೆ. ಉಸಿರುಗಟ್ಟುವ ಮನೆಯಲ್ಲಿಯೇ ಕೊಳೆಯುವ ಹೆಂಗಸರಿಗೆ ಉಸಿರಾಡಲು ದೊರೆಯುವ ಬಿಡುಗಡೆ ಸಮಯವೆಂದರೆ, ಹಲವಾರು ಮೈಲು ದೂರದ ನೀರಿನ ಒರತೆಯಿಂದ ನೀರು ತರುವಾಗ ಮಾತ್ರ. ಊರಿನ ಗಡಿಯನ್ನು ದಾಟಿದ ಕೂಡಲೇ ಮನಬಿಚ್ಚಿ ಹರಟೆಯಲ್ಲಿ ತೊಡಗಿ ನೀರು ತುಂಬಿಸಿ ಮರಳಿ ಊರ ಗಡಿ ಮುಟ್ಟುವವರೆಗೆ ಮಾತ್ರ ಗಟ್ಟಿಯಾಗಿ ಮಾತನಾಡುವ ಸ್ವಾತಂತ್ರ್ಯ. ಮನೆ ಸೇರಿದ ನಂತರ ಮತ್ತದೇ ಬಂಧನದ ಬದುಕು.

ದೇವಿ ಹಬ್ಬಕ್ಕೆ ಎಂಟು ದಿನವಿದೆ ಎನ್ನುವಾಗ ಕಥನ ಆರಂಭವಾಗುತ್ತದೆ. ಅದೇ ರಾತ್ರಿ ತುರ್ತು ಪರಿಸ್ಥಿತಿ ಘೋಷಣೆಯಾಗುತ್ತದೆ. ಮಳೆಗಾಗಿ ದಿನವೂ ರಾತ್ರಿ ಗಂಡಸರು ದೇಹ ದಣಿಯುವಂತೆ ವೀರಾವೇಶದಿಂದ ಕುಣಿದು ನರ್ತಿಸುತ್ತಾರೆ. ಮಹಿಳೆಯರು ಅದನ್ನು ನೋಡುವಂತೆಯೂ ಇಲ್ಲ. ಇಂತಹ ಸನ್ನಿವೇಶದಲ್ಲಿ ಸೇನೆಯಿಂದ ಎಂಟು ದಿನ ರಜೆ ಪಡೆದು ಊರಿಗೆ ಬಂದ ಊರ ಸೈನಿಕನನ್ನು ದೂರದ ಹಳ್ಳಿಯ ಮಂಜರಿ ಎಂಬ ಕೋಮಲೆ ಮದುವೆಯಾಗಿ ಬರುತ್ತಾಳೆ. ಮೊದಲನೆಯ ರಾತ್ರಿಯೇ ಗಂಡನಾಡುವ ಅಹಂಕಾರದ ಮಾತುಗಳು (ಶಾಲಾ ಮೆಟ್ಟಿಲು ಹತ್ತಿದ ಹೆಣ್ಣುಗಳು ಬಾಲ ಬಿಚ್ಚಬಾರದು) ತಾನು ಮದುವೆಯಾಗಿರುವ ಊರಿನ ಪುರುಷ ಅಹಂಕಾರವನ್ನು ಪರಿಚಯಿಸುತ್ತದೆ. ಸೇನೆಗೆ ಗಂಡ ಹಿಂದಿರುಗಿದ ನಂತರ ಮನೆಗೆ ಹೊಂದಿಕೊಳ್ಳುತ್ತಾಳೆ. ನೀರು ತರಲು ಇತರರೊಡನೆ ಹೆಜ್ಜೆಹಾಕುವ ಮಂಜರಿಯ ಸೊಬಗು, ಮಾತು, ವರ್ತನೆ ಊರಿನ ಹೆಂಗಳೆಯರಲ್ಲಿ ಪ್ರೀತಿ, ಅಸೂಯೆ, ಮತ್ಸರ ಹುಟ್ಟುಹಾಕುತ್ತದೆ. ಅವಳ ಮುಗ್ಧತೆ ಸರಳತೆಯೇ ಕೇಡಿಗೆ ಕಾರಣವಾಗಬಹುದೆಂಬ ಸಂಶಯ ಸಂಪ್ರದಾಯಸ್ಥ ಮಹಿಳೆಯರನ್ನು ಕಾಡುತ್ತದೆ.

ಇಂತಹ ಸನ್ನಿವೇಶದಲ್ಲಿ ಒಂದು ದಿನ ಮರಳುಗಾಡಿನಲ್ಲಿ ಸುಸ್ತಾಗಿ ಬಿದ್ದ ವ್ಯಕ್ತಿಯೊಬ್ಬನ ಭೇಟಿಯಾಗುತ್ತದೆ. ಅವನ ಪರಿಸ್ಥಿತಿಯನ್ನು ಕಂಡು ಯಾವ ಜಾತಿಯವನೋ ಏನೋ ಎಂದು ಇತರರು ಅಡ್ಡಿಪಡಿಸಿದರೂ ಮಂಜರಿ ಅವನಿಗೆ ನೀರುಣಿಸುತ್ತಾಳೆ. ಆ ನೀರಿನ ಹನಿಗಳ ಜೊತೆಗೆ ಮಹಿಳೆಯರ ಬದುಕಿನಲ್ಲಿ ಬದಲಾವಣೆಯ ಬೀಜ ಅಂಕುರಿಸುತ್ತದೆ. ತನ್ನನ್ನು ಬದುಕಿಸಿದ ಹೆಣ್ಣಿನ ಪ್ರೀತಿಗೆ ಕೃತಜ್ಞತೆ ಸಲ್ಲಿಸಲು ಎಂಬಂತೆ ಆತ ತನ್ನ ಡೋಲನ್ನು ನುಡಿಸುತ್ತಾನೆ. ಆತ ಸೃಷ್ಟಿಸಿದ ನಾದ ಲಯಕ್ಕೆ ಪರವಶಳಾದ ಮಂಜರಿ ಊರಿನ ಹೆಣ್ಣು ಮಕ್ಕಳ ಮಿಶ್ರ ಪ್ರತಿಕ್ರಿಯೆ ಎದುರು ಹೆಜ್ಜೆಹಾಕುತ್ತಾಳೆ. ಕಟ್ಟಳೆಗಳನ್ನು ಮೀರುವ ಆಂಗಿಕ ವಿನ್ಯಾಸದಲ್ಲಿ ನರ್ತಿಸತೊಡಗುತ್ತಾಳೆ. ಶಿವನ ಡಮರುವಿಗೆ ನರ್ತಿಸುವ ಶಿವ ಗಣದಂತೆ ಕ್ರಮೇಣ ಹೆಂಗಸರು ಮಂಜರಿಯ ಜತೆಗೂಡುತ್ತಾರೆ. ಮುಂದಿನ ಪರಿವೆಯಿಲ್ಲದೆ ಉಲ್ಲಾಸ, ಆನಂದ, ತೃಪ್ತ ಭಾವದಿಂದ ಕುಣಿಯುತ್ತಾರೆ. ಬೆವರನ್ನು ಹೊರಚೆಲ್ಲಿ ಹಗುರವಾಗುತ್ತಾರೆ. ನಗುವನ್ನು ತುಟಿಗೆ ಮೆತ್ತಿಕೊಳ್ಳುತ್ತಾರೆ. ಒಂದೆರಡು ಹೆಂಗಸರು ಅದು ಕೇಡುಗಾಲದ ಕುರುಹೆಂದು ಧಿಕ್ಕರಿಸಿದರೂ ಪ್ರತಿದಿನ ನೀರು ತರುವ ಹಾದಿಯಲ್ಲಿ ಸಂಗೀತ, ನರ್ತನ ದೃಶ್ಯ ಪುನರಾವರ್ತನೆಯಾಗುತ್ತದೆ. ಮನೆಯಲ್ಲಿ ಕಾಣದಂತೆ ಆಹಾರ ಕಟ್ಟಿಕೊಂಡು ಬರುತ್ತಾರೆ. ತಮ್ಮ ದುಪ್ಪಟವನ್ನು ಕಟ್ಟಿ ಆ ಕಲಾವಿದನಿಗೆ ನೆರಳು ನೀಡುತ್ತಾರೆ.

ಅಪಾರ ನೋವನ್ನು ತುಂಬಿಕೊಂಡು ಹುಟ್ಟಿದೂರಿನಿಂದ ತಪ್ಪಿಸಿಕೊಂಡು ಬಂದ ಅಪರಿಚಿತ ಕಲಾವಿದನಿಗೂ ದಾರುಣ ಹಿನ್ನೆಲೆಯಿದೆ. ಅಸ್ಪೃಶ್ಯ ಜನಾಂಗದ ಆತ ಮೇಲ್ಜಾತಿಯ ಹೆಣ ಸುಡುವ ಸಮಯದಲ್ಲಿ ಹೆಂಡತಿ ಮಗಳು ಮೈಮರೆತು ನೃತ್ಯ ಮಾಡಿದ್ದರೆಂದು ಮನೆಯಲ್ಲೇ ಸುಟ್ಟು ಹೆಣವಾದದ್ದನ್ನು ಕಂಡಿದ್ದಾನೆ. ಈ ಮಹಿಳೆಯರಿಗೂ ಕೇಡಾಗಬಹುದೆಂದು ಕಾಣೆಯಾದರೂ, ಮಹಿಳೆಯರು ಅವನನ್ನು ಹುಡುಕುತ್ತಾರೆ. ದುರ್ಗಾ ಪೂಜೆಗೆ ಎರಡು ದಿನ ಬಾಕಿ ಇದೆ. ಊರಿನಲ್ಲಿ ರಾತ್ರಿ ಕುಣಿಯುವ ಗಂಡಸರಿಗೆ ಡೋಲು ನುಡಿಸಿ ಅಲ್ಲಿಯೇ ಆಶ್ರಯ ಪಡೆಯಲು ಹೆಣ್ಣು ಮಕ್ಕಳು ಸೂಚಿಸುವ ಸಲಹೆಯಂತೆ ಕಥೆ ಮುಂದುವರಿಯುತ್ತದೆ. ಊರಿನ ಗಂಡಸರು ಅವನ ಡೋಲಿನ ನಾದಕ್ಕೆ ಮಣಿಯುತ್ತಾರೆ. ರಾತ್ರಿ ಹೊರಗೆ ಗಂಡಸರು ಕುಣಿದು ಕುಪ್ಪಳಿಸಿದರೆ, ಹೆಂಗಸರು ಮನೆಯೊಳಗೆ ನರ್ತಿಸಿ ಸಂಭ್ರಮಿಸುತ್ತಾರೆ. ಆತನ ಕೀಳುಜಾತಿಯ ರಹಸ್ಯ ಬಯಲಾದಾಗ ದುರ್ಗಾ ಪೂಜೆಯ ಕೊನೆ ದಿನ ಅವನನ್ನು ಬಲಿ ಕೊಡಲು ನಿರ್ಣಯಿಸುತ್ತಾರೆ. ಆದರೆ ಡೋಲು ಹರಿಯುವವರೆಗೂ ನುಡಿಸಲು ಕೊನೆಯ ಅವಕಾಶವನ್ನು ಪಡೆದ ಆತ ತನ್ನ ಜೀವ, ಭಾವ ಎಲ್ಲವನ್ನೂ ಬೆರೆಸಿ ಭೂಮಿ ಆಕಾಶ ಒಂದಾಗುವ ರೀತಿಯಲ್ಲಿ ನಾದ ಲೋಕವನ್ನು ಸೃಷ್ಟಿಸುತ್ತಾನೆ. ಆಕಾಶ ಬಿರುಕು ಬಿಟ್ಟಂತೆ ಮಳೆ ಸುರಿಯುತ್ತದೆ. ಗಂಡಸರು ಕಲ್ಲಿನಂತೆ ನಿಂತರೆ, ಪುರುಷಬಂಧನವನ್ನು ಕಿತ್ತೊಗೆದವರಂತೆ ಹೊಸ್ತಿಲು ದಾಟಿ ಹೊರಬಂದ ಮಹಿಳೆಯರು ಕುಣಿಯತೊಡಗುತ್ತಾರೆ. ಎಲ್ಲಾ ಕಟ್ಟಳೆಗಳನ್ನು ಸ್ಫೋಟಿಸುವಂತೆ ಗಿರಗಿರನೆ ನರ್ತನ ವೃತ್ತವನ್ನು ಸೃಷ್ಟಿಸಿ ಗಂಡಸರನ್ನು ಸುತ್ತುವರಿಯುತ್ತಾರೆ. ಡೋಲಿನ ನಾದ, ಮಳೆಯ ತಾಳ, ಮಹಿಳೆಯರ ನರ್ತನದ ಸಂಗಮದಲ್ಲಿ ಪುರುಷ ಅಹಂಕಾರ ನೀರಾಗಿ ಕರಗುವ ಹಂತದಲ್ಲಿ ಚಿತ್ರ ಮುಗಿಯುತ್ತದೆ.

ರಂಗಭೂಮಿಯಲ್ಲಿ ಹದಿನೇಳು ವರ್ಷ ಅನುಭವ ಪಡೆದ ಅಭಿಷೇಕ್ ಶಾ ಅವರ ಮೊದಲ ಪ್ರಯತ್ನವಿದು. ಇನ್ನೂ ಮೂವತ್ತರ ಆಸುಪಾಸಿನ ಈ ತರುಣ ಸಿನೆಮಾದ ಸಾಧ್ಯತೆಗಳನ್ನು ಕರಗತ ಮಾಡಿಕೊಂಡಿರುವುದನ್ನು ತಮ್ಮ ಮೊದಲ ಚಿತ್ರದಲ್ಲಿಯೇ ನಿರೂಪಿಸಿದ್ದಾರೆ. ಮರುಭೂಮಿಯಲ್ಲಿ ಹಳ್ಳಿಯೊಂದನ್ನು ಸೃಷ್ಟಿಸಿ ತುರ್ತು ಪರಿಸ್ಥಿತಿ ಘೋಷಣೆಯ ದಿನದಿಂದ ಆರಂಭವಾಗುವ ಕಥನಕ್ಕೆ ದೇಶ ಮತ್ತು ಸಮುದಾಯದ ಸ್ವಾತಂತ್ರ್ಯ ಹರಣದ ಸಮಾಂತರ ಎಳೆಗಳನ್ನು ಜೋಡಿಸುವುದರಲ್ಲಿ ಆತನ ಕೌಶಲ ಎದ್ದುಕಾಣುತ್ತದೆ. ತಳಸಮುದಾಯದ ಸಂತ್ರಸ್ತನೊಬ್ಬ ತನ್ನ ಕಲೆಯ ಮೂಲಕ ಮಹಿಳೆಯರ ವಿಮೋಚನೆಯ ಹರಿಕಾರನಾಗಿರುವುದು ಇಲ್ಲಿನ ವಿಶೇಷ. ಮಹಿಳೆ ಮತ್ತು ತಳಸಮುದಾಯ ಸಾಮಾಜಿಕ ದಮನದ ವಿಷಯದಲ್ಲಿ ಸಮಾನ ಸಂತ್ರಸ್ತರು ತಾನೇ!? ಬಿಡುಗಡೆಯ ಹಾದಿಯನ್ನು ಅವರು ಜೊತೆಯಾಗಿ ಕಂಡುಕೊಳ್ಳುವ ರೀತಿಯಲ್ಲೂ ಚಿತ್ರ ವಿಶೇಷವಾಗಿದೆ.

ವಿಶಾಲ ಬಯಲನ್ನು ತುಂಬಿಕೊಳ್ಳುವಂತೆ ಅನುರಣಿಸುವ ಸೋಲಿನ ನಿನಾದದ ಲಯಕ್ಕೆ ಮಿಲನವಾಗುವಂತೆ ಹಳ್ಳಿಯ ಹೆಣ್ಣು ಮಕ್ಕಳು ನರ್ತಿಸುವ ದೃಶ್ಯವನ್ನು ಅಪೂರ್ವ ಕುಶಲತೆಯಿಂದ ನೃತ್ಯ, ಸಂಗೀತ ನಿರ್ದೇಶಕ ಮಹೇಶ್ ಸುರ್ತಿ ಮತ್ತು ಛಾಯಾಗ್ರಾಹಕ ತ್ರಿಭುವನ್‌ದಾಸ್ ಸದಿನೇನಿ ಇಡೀ ಸಿನೆಮಾವನ್ನು ಒಂದು ಸುಂದರ ಅನುಭವವಾಗುವಂತೆ ರೂಪಿಸಿದ್ದಾರೆ. ಎಲ್ಲಿಯೂ ಅನಗತ್ಯ ದೃಶ್ಯಗಳಿರದಂತೆ ನಿರ್ದೇಶಕ ಎಚ್ಚರ ವಹಿಸಿದ್ದಾರೆ. ನೃತ್ಯಸಂಗೀತ ಪ್ರಧಾನವಾದ ಈ ಚಿತ್ರವನ್ನು ನೋಡಿದ ನಂತರ ಸಾಮಾಜಿಕ ಸಮಸ್ಯೆಗಳಿಗೆ ಇದೇರೀತಿಯ ರೊಮ್ಯಾಂಟಿಕ್ ಪರಿಹಾರವನ್ನು ಸೂಚಿಸುವ ತೆಲುಗು ಚಿತ್ರ ನಿರ್ದೇಶಕ ಕೆ. ವಿಶ್ವನಾಥ್ ಅವರ ಚಿತ್ರಗಳು ಸಪ್ತಪದಿ (ಅಸ್ಪೃಶ್ಯತೆ), ಶುಭಲೇಖ (ವರದಕ್ಷಿಣೆ) ಇತ್ಯಾದಿ ನೆನಪಾದವು. ಅತ್ಯಂತ ಗಟ್ಟಿಯಾಗಿ ಬೇರು ಬಿಟ್ಟ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ನೃತ್ಯ-ಸಂಗೀತ ಒಂದು ಮಾರ್ಗವಾಗಿ ಒದಗಿ ಬರುವ ರೊಮ್ಯಾಂಟಿಕ್ ವಿಧಾನವನ್ನು ವಿಶ್ವನಾಥ್ ಅವರು ರೂಪಿಸಿ ಯಶಸ್ಸು ಕಂಡರು. ಪ್ರೇಕ್ಷಕರನ್ನು ಭಾವನಾತ್ಮಕ ಯಾನದಲ್ಲಿ ಕರೆದೊಯ್ಯುವ ಮೂಲಕ ಸಾಮಾಜಿಕ ಪರಿವರ್ತನೆಯ ಸಾಧ್ಯತೆಯನ್ನು ಮುಟ್ಟಿಸುವ ರಮ್ಯಮಾರ್ಗಕ್ಕೆ ನೃತ್ಯ-ಸಂಗೀತ ಬಳಸುವುದು ಭಾರತೀಯ ಚಿತ್ರರಂಗದಲ್ಲಿ ಮೊದಲಿನಿಂದಲೂ ಒಂದು ಪಂಥವಾಗಿ ಬಂದಿದೆ. ಆದರೆ ವಿಮರ್ಶಕರ ಒಂದು ವರ್ಗ ಇದನ್ನು ಕಟುವಾಗಿ ವಿಮರ್ಶಿಸಿ ಅದೊಂದು ನಯವಂಚನೆಯ ವಿಧಾನವೆಂದು ಟೀಕಿಸುತ್ತಾರೆ. ಆದರೆ ರೊಮ್ಯಾಂಟಿಕ್ ಕಲ್ಪನೆಯ ಪರವಾದ ವಿಮರ್ಶಕರು, ಹೆಚ್ಚು ಸಂಘರ್ಷವಿಲ್ಲದ ಸೌಂದರ್ಯಾತ್ಮಕವಾದ ಹಾಗೂ ಹಿಂಸಾಮುಕ್ತವಾದ ಅಪೇಕ್ಷಣೀಯ ಮಾರ್ಗವಿದೆಂದು ನಂಬುತ್ತಾರೆ. ಮನೋರಂಜನೆಯ ಜೊತೆಯಲ್ಲಿಯೇ ಮನೋವಿಕಾಸವನ್ನು ಬೆಸೆಯುವ ಮಾರ್ಗವೆಂದು ತರ್ಕಿಸುತ್ತಾರೆ. ಹೆಲ್ಲರೊ ಅಂತಹ ಎರಡನೆಯ ಮಾರ್ಗಕ್ಕೆ ಸೇರಿದ ಚಿತ್ರ.

ಗುಜರಾತಿ ಭಾಷೆಯಲ್ಲಿ ‘ಹೆಲ್ಲರೊ’ ಅಂದರೆ ‘ಕೂಗು’, ‘ಚೀರು’, ‘ಸಿಡಿ’, ‘ಸ್ಫೋಟ’ ಇತ್ಯಾದಿ ಅರ್ಥಗಳನ್ನು ಪ್ರತಿನಿಧಿಸುತ್ತದೆಯಂತೆ. ಹೆಣ್ಣಿನ ವಿಮೋಚನೆಯ ಪ್ರಯತ್ನಕ್ಕೆ ಇದು ಧ್ವನಿಪೂರ್ಣ ಶೀರ್ಷಿಕೆಯಾಗಿದೆ. ಅಂದಹಾಗೆ, ಇದು ಅತ್ಯುತ್ತಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ (ಸ್ವರ್ಣಕಮಲ) ಪುರಸ್ಕೃತವಾದ ಮೊದಲ ಗುಜರಾತಿ ಸಿನೆಮಾ. ಈ ಹಿಂದೆ ಕೇತನ್ ಮೆಹ್ತಾ ಅವರ ‘ಭಾವ್ನಿ ಭಾವೈ’ ಅತ್ಯುತ್ತಮ ಭಾವೈಕ್ಯ ಚಿತ್ರ ಪ್ರಶಸ್ತಿ ಪಡೆದಿದ್ದನ್ನು ಹೊರತುಪಡಿಸಿದರೆ ಗುಜರಾತಿ ಭಾಷೆಯ ಚಿತ್ರಗಳು ರಾಷ್ಟ್ರೀಯ ಪುರಸ್ಕಾರದ ಬೇರೆ ಯಾದಿಯಲ್ಲಿ ಪ್ರಶಸ್ತಿ ಗಳಿಸಿರುವುದು ವಿರಳ. ಮೊದಲ ಬಾರಿಗೆ ಅತ್ಯುತ್ತಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮಲಯಾಳಂನ ‘ಚೆಮ್ಮೀನ್’ ಮತ್ತು ಕನ್ನಡದ ‘ಸಂಸ್ಕಾರ’ ಆಯಾ ಭಾಷೆಯ ಚಿತ್ರರಂಗ ಹೊರಳು ಹಾದಿ ಹಿಡಿಯಲು ಮುನ್ನುಡಿ ಬರೆದವು. ಅದೇ ರೀತಿ ‘ಹೆಲ್ಲರೊ’ ಚಿತ್ರವು ಗುಜರಾತಿ ಚಿತ್ರರಂಗದಲ್ಲಿ ಹೊಸ ಉತ್ಸಾಹ ಸೃಷ್ಟಿಸುವುದೇ ಕಾದು ನೋಡಬೇಕು.

share
ಕೆ. ಪುಟ್ಟಸ್ವಾಮಿ
ಕೆ. ಪುಟ್ಟಸ್ವಾಮಿ
Next Story
X