ನೆರೆ ಸಂತ್ರಸ್ತರಿಗೆ ಮಧ್ಯಂತರ ನೆರವು; ವಿಪಕ್ಷಗಳ ಆರೋಪ ಸಲ್ಲದು: ನಳಿನ್

ಮಂಗಳೂರು, ಅ.6: ರಾಜ್ಯದಲ್ಲಿ ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಸರಕಾರ 1,200 ಕೋಟಿ ರೂ. ಮಧ್ಯಂತರ ನೆರವನ್ನು ಬಿಡುಗಡೆ ಮಾಡಿದೆ. ಪೂರ್ಣ ಪ್ರಮಾಣದ ನೆರವಿನ ಮೊತ್ತವನ್ನು ಶೀಘ್ರವೇ ಕೇಂದ್ರ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಆದರೆ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಏನೂ ಕಾರಣ ಸಿಗದೆ ವಿಪಕ್ಷಗಳು ಬಿಡುಗಡೆಯಾದ ನೆರೆ ಪರಿಹಾರ ಮೊತ್ತದ ಕುರಿತು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ದ.ಕ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ರವಿವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರದ ವಿರುದ್ಧ ಆರೋಪ ಮಾಡುತ್ತಿರುವವರು ಮಾಜಿ ಮುಖ್ಯಮಂತ್ರಿಗಳು. ಅವರಿಗೆ ಈ ಹಿಂದೆ ಸರಕಾರ ನಡೆಸಿ ಗೊತ್ತಿದೆ. ಆಗಲೂ ನೆರೆ, ಬರ ಬಂದಿತ್ತು. ಆಗ ಅವರದೇ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇತ್ತು. ಆಗ ಎಷ್ಟು ಮೊತ್ತವನ್ನು ರಾಜ್ಯಕ್ಕೆ ಬಿಡುಗಡೆಗೊಳಿಸಿದ್ದಾರೆ? ಕೇಂದ್ರ ಸರಕಾರ ಕೇಂದ್ರ ವಿಪತ್ತು ಪರಿಹಾರ ನಿಧಿ ಯೋಜನೆಯಡಿ ಮಧ್ಯಂತರ ಪರಿಹಾರ ನೀಡಿದೆ. ಪೂರ್ಣ ಪರಿಹಾರ ಮೊತ್ತವನ್ನು ಇನ್ನಷ್ಟೆ ನೀಡಬೇಕಾಗಿದೆ. ಹಾಗೆ ನೋಡಿದರೆ, ವಿಪಕ್ಷಗಳು ಆಡಳಿತ ನಡೆಸಿದ ಸಂದರ್ಭ ಅವುಗಳು ರಾಜ್ಯವನ್ನು ಲೂಟಿ ನಡೆಸಿರುವುದನ್ನು ಗಮನಿಸಿದರೆ, ಅದೇ ಮೊತ್ತವನ್ನು ಪ್ರಾಕೃತಿಕ ವಿಕೋಪ ಪರಿಹಾರಕ್ಕೆ ನೀಡಿದರೂ ಸಾಕಾಗುತ್ತಿತ್ತು ಎಂದು ವ್ಯಂಗ್ಯವಾಡಿದರು.
2009ರಿಂದ 2014ರವರೆಗೆ ರಾಜ್ಯಕ್ಕೆ ಕೇಂದ್ರದಿಂದ ಎಷ್ಟು ಪ್ರಾಕೃತಿಕ ವಿಕೋಪ ಪರಿಹಾರ ಮೊತ್ತ ಬಂದಿದೆ? 2014ರಿಂದ 2019ರ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಲಭಿಸಿದ ಪ್ರಾಕೃತಿಕ ವಿಕೋಪ ಪರಿಹಾರ ಅನುದಾನ ಎಷ್ಟು ಎಂಬುದನ್ನು ವಿಪಕ್ಷಗಳು ಲೆಕ್ಕ ಹಾಕಿ ನೋಡಲಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.





