ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ

ಮಂಗಳೂರು, ಅ. 6: ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದ ಸಂಕೀರ್ಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯ ಕಚೇರಿಯನ್ನು ರವಿವಾರ ಸಂಸದ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಜಿಲ್ಲೆಯ ಅಭಿವೃದ್ಧಿಗೆ ಕೈಗೊಳ್ಳ ಬೇಕಾದ ಮತ್ತು ಪ್ರಸ್ತುತ ಪ್ರಗತಿಯಲ್ಲಿರುವ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸ ತನಗಿದೆ ಎಂದರು.
ಈಗಾಗಲೇ ಕಾರ್ಯಗತಗೊಂಡು ಪ್ರಗತಿಯಲ್ಲಿರುವ ಯೋಜನೆಗಳ ವೇಗ ವರ್ಧಿಸಲು ಹಾಗೂ ಸಮಸ್ಯೆಗಳಿದ್ದರೆ ಅವುಗಳನ್ನು ಕೋಟ ಶ್ರೀನಿವಾಸ ಪೂಜಾರಿ ಬಗೆಹರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದು, ಅವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ನಳಿನ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಸೋಮವಾರ ಕಚೇರಿಯಲ್ಲಿ ಲಭ್ಯ:ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ತಾನು ಈ ಕಚೇರಿಯಲ್ಲಿ ಪ್ರತಿ ಸೋಮವಾರವಿಡೀ ಸಾರ್ವಜನಿಕರಿಗೆ ಲಭ್ಯವಿರುತ್ತೇನೆ. ಕಚೇರಿಗೆ ಅನುಭವಿ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡಲು ಕ್ರಮ ಜರುಗಿಸುತ್ತೇನೆ ಎಂದರು.
ಈ ಸಂದರ್ಭ ಶಾಸಕರಾದ ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಕೃಷ್ಣ ಜೆ. ಪಾಲೆಮಾರ್, ಮೋನಪ್ಪ ಭಂಡಾರಿ, ಬಿಜೆಪಿ ನಾಯಕರಾದ ಉದಯ ಕುಮಾರ್ ಶೆಟ್ಟಿ, ರವಿ ಶಂಕರ ಮಿಜಾರು, ಯಶ್‌ಪಾಲ್ ಸುವರ್ಣ, ಅನ್ವರ್ ಮಾಣಿಪ್ಪಾಡಿ, ಹರಿಕೃಷ್ಣ ಬಂಟ್ವಾಳ್, ಸುಲೋಚನ ಭಟ್ ಮತ್ತಿತರರು ಉಪಸ್ಥಿತರಿದ್ದರು.







