ಪಿಲಿಕುಳ: ‘ವನ್ಯಜೀವಿ ಸಪ್ತಾಹ’ದ ಅಂಗವಾಗಿ ವಿವಿಧ ಸ್ಪರ್ಧೆ

ವಾಮಂಜೂರು, ಅ.6: ಪಿಲಿಕುಳ ವನ್ಯಜೀವಿಗಳ ಸಂರಕ್ಷಣೆ ಮನುಕುಲದ ಆದ್ಯ ಕರ್ತವ್ಯವಾಗಿದೆ. ಅವು ಮಾನವನ ಜೀವನದ ಅವಿಭಾಜ್ಯ ಅಂಗವೂ ಆಗಿದೆ. ವನ್ಯಜೀವಿಗಳ ಬಗ್ಗೆ ಪ್ರೀತಿ ಬೆಳೆಸಿಕೊಂಡಲ್ಲಿ, ಅದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರಿಸರದ ಮೇಲೆ ಪರಿಣಾಮ ಬೀರಲಿದೆ ಎಂದು ಕಾರ್ಕಳ ವನ್ಯಜೀವಿ ವಿಭಾಗದ ಡಿಎಫ್‌ಒ ರುದ್ರನ್ ಅಭಿಪ್ರಾಯಪಟ್ಟರು.
ಪಿಲಿಕುಳ ಜೈವಿಕ ಉದ್ಯಾನ ಮತ್ತು ಜೀವವೈವಿಧ್ಯದ ಪಾಲುದಾರ ಸಂಸ್ಥೆಯಾದ ಎಂಆರ್‌ಪಿಎಲ್ ಜಂಟಿಯಾಗಿ ಪಿಲಿಕುಳ ನಿಸರ್ಗಧಾಮದಲ್ಲಿ ರವಿವಾರ ಆಯೋಜಿಸಿದ ‘ವನ್ಯಜೀವಿ ಸಪ್ತಾಹ-2019’ ಹಾಗೂ ವನ್ಯಜೀವಿ ಚಿತ್ರಕಲೆ, ಛಾಯಾಚಿತ್ರ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ವೇದಿಕೆಯಲ್ಲಿ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾಧ್ಯಕ್ಷ ಶಾಂತಾರಾಮ್ ಶೆಟ್ಟಿ, ಪಿಲಿಕುಳ ಆಡಳಿತ ಸಮಿತಿಯ ಸದಸ್ಯರಾದ ಟಿ. ಸುಬ್ಬಯ್ಯ ಶೆಟ್ಟಿ ಹಾಗೂ ಜಿ ಎನ್ ಮೋಹನ್, ಪಿಲಿಕುಳ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಕೆ ವಿ ರಾವ್, ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಹಣಾಧಿಕಾರಿ ಮೇಘನಾ ಆರ್, ಕಮಲ್ ಆರ್ಟಿಸ್ಟ್ ಮೊದಲಾದವರಿದ್ದರು.
ಹಿರಿಯ ಕಲಾವಿದ ಗಣೇಶ ಸೋಮಯಾಜಿ ವನ್ಯಜೀವಿಗಳ ಚಿತ್ರ ಬಿಡಿಸಿ ಅನಾವರಣಗೊಳಿಸಿದರು. ಪ್ರಸಾದ್ ಆರ್ಟ್ ಗ್ಯಾಲರಿಯ ಮಾಲಕ ಕೋಟಿಪ್ರಸಾದ ಆಳ್ವ ವಂದಿಸಿದರು.
ಪಿಲಿಕುಳ ನಿಸರ್ಗಧಾಮದ ಮಡಿಲಲ್ಲಿ ಶಾಲಾ ಮಕ್ಕಳಿಗಾಗಿ ಆಯೋಜಿಸಲಾದ ವನ್ಯಜೀವಿ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಮಟ್ಟದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.








