ವಿವಿಧ ಅಪರಾಧ ಪ್ರಕರಣ: ಗುಂಡಿಕ್ಕಿ ಇಬ್ಬರು ರೌಡಿಗಳ ಬಂಧನ

ಬೆಂಗಳೂರು, ಅ.6: ಸುಲಿಗೆ, ಇನ್ನಿತರ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಂದಿನಿ ಲೇಔಟ್‌ನ ಇಬ್ಬರು ರೌಡಿಗಳಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಜಾಲಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಂದಿನಿ ಲೇಔಟ್‌ನ ವಿಜಯಾ(25), ಹನುಮಂತ(24) ಗಾಯಗೊಂಡಿರುವ ರೌಡಿಗಳಾಗಿದ್ದು, ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಲಕ್ಷ್ಮೀದೇವಿ ನಗರದಲ್ಲಿ ನಾಗರತ್ನ ಎಂಬುವರ ಮಾಂಗಲ್ಯಸರ ಕಸಿದು ಈ ಇಬ್ಬರು ರೌಡಿಗಳು ಪರಾರಿಯಾಗಿದ್ದರು ಎನ್ನಲಾಗಿದೆ. ಈ ಸಂಬಂಧ ರವಿವಾರ ಕಾರ್ಯಾಚರಣೆ ನಡೆಸಿದ ಉತ್ತರ ವಿಭಾಗದ ಪೊಲೀಸರಿಗೆ, ಆರೋಪಿಗಳು ಕೂಲಿನಗರದ ಬಳಿ ಅಡಗಿರುವುದು ತಿಳಿದಿದೆ. ಮುಂಜಾನೆ ಸ್ಥಳಕ್ಕೆ ಪೊಲೀಸರು ತೆರಳಿದಾಗ ಅವರ ವಾಹನವನ್ನು ಕಂಡ ಓಡುತ್ತಿದ್ದ ವಿಜಯಾ ಹಾಗೂ ಹನುಮಂತನನ್ನು ಮುಖ್ಯ ಪೇದೆಗಳಾದ ಶ್ರೀನಿವಾಸ್ ಮೂರ್ತಿ ಹಾಗೂ ನರೇಶ್ ಅವರು ಬೆನ್ನಟ್ಟಿ ಹಿಡಿಯಲು ಹೋಗಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದಾಗ ಠಾಣಾ ಇನ್ಸ್‌ಪೆಕ್ಟರ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಆದರೂ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು, ಅವುಗಳು ಇಬ್ಬರ ಬಲಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಇಬ್ಬರನ್ನೂ ಬಂಧಿಸಿ, ಆಸ್ಪತ್ರೆಗೆ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.