‘ದೇವರು ಮತ್ತು ವಿಶ್ವ’ ಪುಸ್ತಕ ಬಿಡುಗಡೆ

ಉಡುಪಿ, ಅ.6: ಮಾರ್ಪಳ್ಳಿ ರಾಮದಾಸ ರಾವ್ ಮೆಮೊರಿಯಲ್ ಟ್ರಸ್ಟ್ ಆಶ್ರಯದಲ್ಲಿ ಮಂಗಳೂರು ವಳಚ್ಚಿಲ್ ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಪ್ರಾಧ್ಯಾಪಕ ಡಾ.ಗಂಗಾಧರ ರಾವ್ ಬರೆದ ‘ದೇವರು ಮತ್ತು ವಿಶ್ವ’ ಪುಸ್ತಕದ ಬಿಡುಗಡೆ ಸಮಾರಂಭವು ರವಿವಾರ ಕುಂಜಿಬೆಟ್ಟು ಶಾರದಾ ಕಲ್ಯಾಣಮಂಟಪದ ಜ್ಞಾನಮಂದಿರದಲ್ಲಿ ನಡೆಯಿತು.
ಪುಸ್ತಕ ಬಿಡುಗಡೆಗೊಳಿಸಿದ ಮುಕ್ಕ ಶ್ರೀನಿವಾಸ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಪ್ರಾಂಶುಪಾಲ ಡಾ.ಥಾಮಸ್ ಪಿಂಟೋ ಮಾತ ನಾಡಿ, ಜಗತ್ತಿನ ಸೃಷ್ಠಿ ದೇವ ಕಣದಿಂದ ಆಗಿದ್ದು, ಇದನ್ನು ವಿಜ್ಞಾನಿಗಳು ಸಂಶೋ ಧನೆಯಿಂದ ಕಂಡುಕೊಂಡಿದ್ದಾರೆ. ಧರ್ಮ ಬೇರೆ ಬೇರೆಯಾದರೂ ದೇವರು ಮಾತ್ರ ಒಂದೇ ಆಗಿದ್ದಾರೆ. ಪುಸ್ತಕಗಳನ್ನು ಓದುವ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಂಶೋಧನಾತ್ಮಕವಾದ ಈ ಪುಸ್ತಕದಿಂದ ಉತ್ಕೃಷ್ಟವಾದ ಜ್ಞಾನ ಸಂಪಾದನೆ ಡೆಯಬಹುದಾಗಿದೆ ಎಂದು ತಿಳಿಸಿದರು.
ಪುಸ್ತಕ ಪರಿಚಯ ಮಾಡಿದ ವಳಚ್ಚಿಲ್ ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಅಟೋಮೊಬೈಲ್ ಮತ್ತು ಎರೊನಾಟಿಕಲ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ರಾಮಕೃಷ್ಣ ಹೆಗಡೆ, ದೇವರು ಮತ್ತು ವಿಶ್ವದ ಬಗ್ಗೆ ವಿಶ್ಲೇಷಣೆ ಮಾಡಿರುವ ಈ ಪುಸ್ತಕ ದೇಶ ಮತ್ತು ಕಾಲದ ಬಗ್ಗೆ ಚಿಂತಿಸುವಂತೆ ಮಾಡುತ್ತದೆ. ಜಗತ್ತು ಮತ್ತು ದೇವರು ಸತ್ಯ ಎಂಬ ವಾದವನ್ನು ಈ ಮೂಲಕ ಮಂಡಿಸುವ ಪ್ರಯತ್ನ ಮಾಡಲಾಗಿದೆ. ಇದರಲ್ಲಿ ಜಗತ್ತು ಸ್ಥಿರವೋ ಅಥವಾ ವಿಕಾಸಗೊಳ್ಳು ತ್ತಿದೆಯೋ ಎಂಬ ಸಂಶಯವನ್ನು ಲೇಖಕರು ವ್ಯಕ್ತಪಡಿಸಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಉಡುಪಿ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ.ಎಸ್. ರಾವ್ ವಹಿಸಿದ್ದರು. ಟ್ರಸ್ಟ್ ಸಂಚಾಲಕ ದತ್ತಾತ್ರೇಯ ಮಾರ್ಪಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಲೇಖಕ ಡಾ.ಗಂಗಾಧರ ರಾವ್ ವಂದಿಸಿದರು.







