ಪಿಎಂಸಿ ಬ್ಯಾಂಕ್ ಹಗರಣ: ಮಾಜಿ ಅಧ್ಯಕ್ಷ ನಿಗೆ ಪೊಲೀಸ್ ಕಸ್ಟಡಿ
ಮುಂಬೈ, ಅ.6: ಪಂಜಾಬ್ ಮತ್ತು ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್(ಪಿಎಂಸಿ)ನ ಮಾಜಿ ಅಧ್ಯಕ್ಷ ವರ್ಯಾಮ್ ಸಿಂಗ್‌ಗೆ ಅಕ್ಟೋಬರ್ 9ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎರಡು ವಾರಗಳಿಂದ ನಾಪತ್ತೆಯಾಗಿದ್ದ 68 ವರ್ಷದ ಸಿಂಗ್‌ರನ್ನು ಶನಿವಾರ ಮಾಹಿಮ್‌ನ ಚರ್ಚ್ ಬಳಿಯ ನಿವಾಸದಲ್ಲಿ ಪತ್ತೆಹಚ್ಚಿ ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಆ ಸಂದರ್ಭ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡ ಸಿಂಗ್ ಅವರ ವಕೀಲ ವೈಭವ್‌ಕೃಷ್ಣ , ಎಚ್‌ಡಿಐಎಲ್‌ಗೆ ಅಕ್ರಮವಾಗಿ ಸಾಲ ಮಂಜೂರು ಮಾಡಿರುವ ಪ್ರಕರಣದಲ್ಲಿ ಸಿಂಗ್ ಅವರ ಪಾತ್ರವಿಲ್ಲ. ಎಲ್ಲಾ ಅಕ್ರಮಗಳಿಗೂ ಪಿಎಂಸಿ ಬ್ಯಾಂಕ್ ಆಡಳಿತ ನಿರ್ದೇಶಕ ಜಾಯ್ ಥಾಮಸ್ ಹೊಣೆಗಾರ ಎಂದು ಹೇಳಿದರು.
ಅಲ್ಲದೆ ಪಿಎಂಸಿ ಬ್ಯಾಂಕ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲೇ ಸಿಂಗ್ ಎಚ್‌ಡಿಐಎಲ್‌ನಲ್ಲಿ ನಿರ್ದೇಶಕನಾಗಿದ್ದರೂ ಇಲ್ಲಿ ಸ್ವಹಿತ ಸಂಘರ್ಷದ ಪ್ರಶ್ನೆ ಉದ್ಭವಿಸುವುದಿಲ್ಲ. ಯಾಕೆಂದರೆ ಹಲವು ಸಮಯದ ಬಳಿಕ ಹಗರಣ ಬೆಳಕಿಗೆ ಬಂದಿದೆ ಎಂದು ವಾದಿಸಿದರು.
ಆದರೆ ಇದಕ್ಕೆ ಸಮ್ಮತಿಸದ ನ್ಯಾಯಾಲಯ, ಸಿಂಗ್‌ಗೆ ಅ.9ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿತು. ಮುಂಬೈ ಪೊಲೀಸರ ಎಫ್‌ಐಆರ್‌ನಲ್ಲಿ ಥಾಮಸ್, ವರ್ಯಾಮ್ ಸಿಂಗ್, ಸಾರಂಗ್ ಮತ್ತು ರಾಕೇಶ್ ವಾಧ್ವಾನ್ ಹಾಗೂ ಇತರ ಅಧಿಕಾರಿಗಳನ್ನು ಹೆಸರಿಸಲಾಗಿದೆ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ದಳವನ್ನು ರಚಿಸಲಾಗಿದೆ.