ಮುಂಬೈನ ಆರೆ ಕಾಲನಿಯಲ್ಲಿ ಮರಗಳ ಕಡಿತಕ್ಕೆ ವಿರೋಧ: ಪ್ರಕಾಶ್ ಅಂಬೇಡ್ಕರ್ ಪೊಲೀಸರ ವಶಕ್ಕೆ

ಮುಂಬೈ, ಅ.6: ಮೆಟ್ರೋ ರೈಲು ಯೋಜನೆಗಾಗಿ ಇಲ್ಲಿಯ ಆರೆ ಕಾಲನಿಯಲ್ಲಿ ಮರಗಳ ಕಡಿತವನ್ನು ಪ್ರತಿಭಟಿಸಲು ಮುಂದಾಗಿದ್ದ ‘ವಂಚಿತ ಬಹುಜನ ಅಘಾಡಿ (ವಿಬಿಎ)’ಯ ನಾಯಕ ಪ್ರಕಾಶ ಅಂಬೇಡ್ಕರ್ ಅವರನ್ನು ಪೊಲೀಸರು ರವಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧನದ ಬಳಿಕ ಅಂಬೇಡ್ಕರ್ ಟ್ವೀಟೊಂದರಲ್ಲಿ ‘ವಿಬಿಎ ಮರಗಳ ಕಡಿತಕ್ಕೆ ವಿರುದ್ಧವಾಗಿದೆ. ಪ್ರತಿಭಟಿಸಲು ಮತ್ತು ಸರಕಾರಕ್ಕೆ ಕೆಲವು ಸೂಕ್ತ ಪ್ರಶ್ನೆಗಳನ್ನು ಕೇಳಲು ನಾನು ಅಲ್ಲಿಗೆ ತೆರಳಿದ್ದೆ. ನನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ,ಬಂಧಿಸಿಲ್ಲ. ನಾನು ಸದ್ಯ ಪೊವಾಯಿ ಪೊಲೀಸ್ ಠಾಣೆಯಲ್ಲಿದ್ದೇನೆ. ಯಾವುದೇ ವದಂತಿಗಳನ್ನು ನಂಬಬೇಡಿ ಮತ್ತು ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಿ’ಎಂದು ತನ್ನ ಬೆಂಬಲಿಗರನ್ನು ಕೋರಿಕೊಂಡಿದ್ದಾರೆ.
ಇದಕ್ಕೂ ಮುನ್ನ ಮರಗಳ ಕಡಿತಕ್ಕೆ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ಸಂದರ್ಭ ಅವರನ್ನು ಎಳೆದಾಡಿ ಹಲ್ಲೆ ನಡೆಸಿದ್ದಕ್ಕಾಗಿ 60 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು,ಬಳಿಕ ಈ ಪೈಕಿ 29 ಜನರನ್ನು ಬಂಧಿಸಿದ್ದಾರೆ. ಪ್ರದೇಶದಲ್ಲಿ ಸಿಪಿಸಿ ಕಲಂ 144ರಡಿ ನಿಷೇಧಾಜ್ಞೆಯನ್ನು ಹೇರಲಾಗಿದೆ.
ಮರಗಳನ್ನು ಕಡಿಯಲು ಅನುಮತಿ ನೀಡಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆಯ ನಿರ್ಧಾರದ ವಿರುದ್ಧ ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಬಾಂಬೆ ಉಚ್ಚ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದ ಬಳಿಕ ರಾತ್ರಿಯಿಂದಲೇ ಆರೆ ಪ್ರದೇಶದಲ್ಲಿ ಪ್ರತಿಭಟನೆಗಳು ಆರಂಭಗೊಂಡಿದ್ದವು. ಪೊಲೀಸರು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದ್ದರಾದರೂ ಪ್ರದೇಶದ ಹೊರಗೆ ರಾತ್ರಿಯಿಡೀ ಹಲವಾರು ಪ್ರತಿಭಟನಾಕಾರರು ಸೇರಿದ್ದರು. ಪ್ರದೇಶಕ್ಕೆ ಜನರ ಪ್ರವೇಶವನ್ನು ಪೊಲೀಸರು ನಿರ್ಬಂಧಿಸಿದ್ದಾರೆ.
ಪೊಲೀಸರು ರವಿವಾರ ವಶಕ್ಕೆ ತೆಗೆದುಕೊಂಡವರಲ್ಲಿ ಶಿವಸೇನೆಯ ಕಾರ್ಪೊರೇಟರ್ ಶೀತಲ್ ಮ್ಹಾತ್ರೆ ಮತ್ತು ಪಕ್ಷದ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರೂ ಸೇರಿದ್ದಾರೆ. ಯುವಸೇನಾ ಅಧ್ಯಕ್ಷ ಆದಿತ್ಯ ಠಾಕ್ರೆ ಅವರು ಶುಕ್ರವಾರ ರಾತ್ರಿ ಮರಗಳ ಕಡಿತವನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಶಿವಸೇನೆ-ಬಿಜೆಪಿ ಮೈತ್ರಿಕೂಟ ಬಿಎಂಪಿಯಲ್ಲಿ ಅಧಿಕಾರದಲ್ಲಿದೆ.







