ಚುನಾವಣೆಗೆ ಸ್ಪರ್ಧಿಸದೆಯೇ ಸರಕಾರ ರಚಿಸುವ ಸಾಮರ್ಥ್ಯ ನಮಗಿದೆ : ಬಿಜೆಪಿ ನಾಯಕ ರಾಮ್ ಮಾಧವ್
ಜನರಿಗೆ ಒಳಿತಾಗುವ 'ಸರ್ವಾಧಿಕಾರಿ ಆಡಳಿತ' ಕ್ಕೆ ಮನ್ನಣೆ ಸಿಗುತ್ತಿದೆ

ಹೊಸದಿಲ್ಲಿ, ಅ. 6: ಸರ್ವಾಧಿಕಾರಿ ನಾಯಕತ್ವದ ಹೊಸ ಯುಗವಾಗಿ ಜಾಗತಿಕ ರಾಜಕೀಯದಲ್ಲಿ ಬದಲಾವಣೆಗೊಳ್ಳುತ್ತಿದ್ದು ಇದರಿಂದ ಜನರಿಗೆ ಒಳಿತಾಗಲಿದೆ ಮತ್ತು ಭಾರತದಲ್ಲೂ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಈ ಬದಲಾವಣೆ ಗೋಚರಿಸುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ತಿಳಿಸಿದ್ದಾರೆ.
ಪತ್ರಕರ್ತ ಸಂತೋಶ್ ಕುಮಾರ್ ಬರೆದಿರುವ ಭಾರತ್ ಕೈಸೆ ಹುವಾ ಮೋದಿಮಯಿ (ಭಾರತ ಮೋದಿಮಯ ಹೇಗಾಯಿತು) ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಮ್ ಮಾಧವ್, ಬಿಜೆಪಿ ಎಷ್ಟೊಂದು ಪರಿಣತ ಪಕ್ಷವಾಗಿದೆ ಎಂದರೆ ಅದು ಚುನಾವಣೆ ಸ್ಪರ್ಧಿಸದೆಯೇ ಸರಕಾರ ರಚಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿದ ಮಾಧವ್, ಇಡೀ ಚುನಾವಣೆಯು ಮೋದಿಯವರನ್ನು ಕೇಂದ್ರಿತವಾಗಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಮತ್ತು ಅವರೇ ದೇಶದ ಜನಪ್ರಿಯ ನಾಯಕರಾಗಿದ್ದಾರೆ. ಆದರೆ ಜಾಗತಿಕ ರಾಜಕೀಯದಲ್ಲಿ ಸರ್ವಾಧಿಕಾರಿ ನಾಯಕತ್ವದ ಹೊಸ ಯುಗ ಆರಂಭವಾಗಿದೆ. ಇದು ಕೆಡುಕುಂಟು ಮಾಡುವ ಯುಗವಲ್ಲ ಬದಲಿಗೆ ಒಳಿತನ್ನು ಮಾಡುವ ಯುಗ ಎಂದು ತಿಳಿಸಿದ್ದಾರೆ.





