ಈ ಭಿಕ್ಷುಕನ ಮನೆಯಲ್ಲಿ ಪತ್ತೆಯಾದ ನಾಣ್ಯಗಳನ್ನು ಎಣಿಸಲು 8 ಗಂಟೆಗಳೇ ಬೇಕಾಯಿತು!
ಈತನ ಬಳಿಯಿದ್ದ ಒಟ್ಟು ಆಸ್ತಿ ಮೌಲ್ಯ ಎಷ್ಟು ಲಕ್ಷ ರೂ. ಗೊತ್ತಾ?

ಮುಂಬೈ, ಅ.7: ಅಕ್ಟೋಬರ್ 4ರಂದು ನಗರದಲ್ಲಿ ಅಪಘಾತವೊಂದರಲ್ಲಿ ಮೃತಪಟ್ಟ ಭಿಕ್ಷುಕನ ಮನೆ ಪ್ರವೇಶಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಹಲವು ಬ್ಯಾಂಕುಗಳಲ್ಲಿ ಹೂಡಲಾದ ಒಟ್ಟು 8.77 ಲಕ್ಷ ರೂ. ಮೌಲ್ಯದ ಫಿಕ್ಸೆಡ್ ಡಿಪಾಸಿಟ್ ದಾಖಲೆಗಳು ಹಾಗೂ ಕನಿಷ್ಠ 1.5 ರೂ. ಲಕ್ಷ ಮೌಲ್ಯದ ನಾಣ್ಯಗಳು ಅಲ್ಲಿ ಪತ್ತೆಯಾಗಿತ್ತು.
ಗೋವಂಡಿ ಹಾಗೂ ಮಂಖುರ್ಡ್ ನಿಲ್ದಾಣಗಳ ನಡುವಿನ ರೈಲ್ವೆ ಹಳಿ ಹಾದು ಹೋಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಭಿಕ್ಷುಕ ಬಿರ್ಜು ಚಂದ್ರ ಆಜಾದ್ ಮೃತಪಟ್ಟಿದ್ದ. ಆತನ ಮನೆ ಹಾಗೂ ಸಂಬಂಧಿಕರನ್ನು ಹುಡುಕಿಕೊಂಡು ಪೊಲೀಸರು ಗೋವಂಡಿ ಪ್ರದೇಶದ ಕೊಳೆಗೇರಿಯಲ್ಲಿ ಆತನ ಒಂದು ಕೊಠಡಿಯ ಮನೆ ಪ್ರವೇಶಿಸಿದಾಗ ಅಲ್ಲಿ ಅವರಿಗೆ ಆತನ ಗುರುತು ಪತ್ರ, ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ದೊರೆತಿತ್ತು. ಅಷ್ಟೇ ಅಲ್ಲದೆ ಕೊಠಡಿ ತುಂಬೆಲ್ಲಾ ಹರಡಿದ್ದ ನಾಣ್ಯಗಳನ್ನು ಲೆಕ್ಕ ಹಾಕಲು ಪೊಲೀಸರಿಗೆ 8 ಗಂಟೆಗಳೇ ಬೇಕಾಯಿತು. ಮನೆ ತುಂಬಾ ಹಳೆ ದಿನಪತ್ರಿಕೆಗಳು ತುಂಬಿಕೊಂಡಿದ್ದವು.
ಆತನ ಫಿಕ್ಸೆಡ್ ಡೆಪಾಸಿಟ್ ಗಳನ್ನು ಹಾಗೆಯೇ ಸುರಕ್ಷಿತವಾಗಿಡಲು ಪೊಲೀಸರು ಬ್ಯಾಂಕುಗಳನ್ನು ಕೇಳಿಕೊಳ್ಳಲಿದ್ದಾರೆ, ಜತೆಗೆ ಆತನ ಮನೆಯಲ್ಲಿದ್ದ ಎಲ್ಲಾ ನಾಣ್ಯಗಳನ್ನೂ ಸುರಕ್ಷತೆಯ ದೃಷ್ಟಿಯಿಂದ ತಮ್ಮೊಂದಿಗೆ ಒಯ್ದಿದ್ದಾರೆ. ಮೃತ ಭಿಕ್ಷುಕನಿಗೆ ಯಾರಾದರೂ ಸಂಬಂಧಿಗಳಿದ್ದಾರೆಯೇ ಎಂದು ಪೊಲೀಸರು ತಿಳಿಯಲು ಯತ್ನಿಸುತ್ತಿದ್ದಾರೆ.





