ನೈಸ್ ರಸ್ತೆಯಲ್ಲಿ ಗುಂಡಿ ಮುಚ್ಚಲು ವಾರದ ಗಡುವು: ಡಿಸಿಎಂ ಡಾ.ಅಶ್ವಥ್ ನಾರಾಯಣ್

ಬೆಂಗಳೂರು, ಅ. 7: ‘ನೈಸ್’ ರಸ್ತೆಯಲ್ಲಿನ ಗುಂಡಿಗಳನ್ನು ವಾರದೊಳಗೆ ಮುಚ್ಚಿ ಸಾವರ್ಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿಗೆ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಗಡುವು ನೀಡಿದ್ದಾರೆ.
ಸೋಮವಾರ ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ನೈಸ್ ರಸ್ತೆ ಖುದ್ದು ಪರಿಶೀಲನೆ ನಡೆಸಿದ ಅವರು, ನೈಸ್ ರಸ್ತೆಯಲ್ಲಿ ಗುಂಡಿಗಳು ಹೆಚ್ಚಿವೆ. ಗುಂಡಿಗಳನ್ನು ಮುಚ್ಚುವಂತೆ ನೈಸ್ ರಸ್ತೆ ಮುಖ್ಯಸ್ಥ ಅಶೋಕ್ ಖೇಣಿ ಅವರಿಗೆ ಸೂಚಿಸಲಾಗಿದೆ. ಒಂದು ವಾರದಲ್ಲಿ ರಸ್ತೆ ಗುಂಡಿ ಮುಚ್ಚುವ ಭರವಸೆಯನ್ನು ನೀಡಿದ್ದಾರೆ. ಒಂದು ವಾರದ ಬಳಿಕ ಮತ್ತೆ ಇಲ್ಲಿಗೆ ಬಂದು ಪರಿಶೀಲನೆ ನಡೆಸುವ ಪ್ರಯತ್ನ ಮಾಡುತ್ತೇನೆ. ಜತೆಗೆ ನೈಸ್ ರಸ್ತೆ ಪ್ರವೇಶ-ನಿರ್ಗಮನದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಸರಿಪಡಿಸಲು ಅವರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ನೈಸ್ ಸಂಸ್ಥೆ ರಸ್ತೆ ನಿರ್ಮಾಣ ಸಂಬಂಧ ಒಪ್ಪಂದ ಉಲ್ಲಂಘಿಸಿದೆ. ಸಿಮೆಂಟ್ ರಸ್ತೆ ನಿರ್ಮಿಸಿದ ಬಳಿಕವೇ ಸಂಚಾರಕ್ಕೆ ಮುಕ್ತಗೊಳಿಸಬೇಕಿತ್ತು. ಆದರೆ ಮಾಡಿಲ್ಲ. ಯಾಕೆ ಕೆಲವು ಕಡೆ ಕಾಂಕ್ರೀಟ್ ರಸ್ತೆ ಮಾಡಿಲ್ಲ. ಅಲ್ಲದೆ, ಕೆಲ ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ ಎಂದರು.
ನೈಸ್ ಅಕ್ರಮಕ್ಕೆ ಸಂಬಂಧಿಸಿದ ಸದನ ಸಮಿತಿ ವರದಿ ಸರಕಾರದ ಮುಂದಿದೆ. ಅದನ್ನು ಜಾರಿ ಮಾಡಲು ಸರಕಾರ ಬದ್ಧವಾಗಿದೆ. ಈ ಸಂಬಂಧ ಇರುವ ಎಲ್ಲ ಅಡೆ-ತಡೆ ನಿವಾರಿಸಿಕೊಂಡು ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅಶ್ವಥ್ ನಾರಾಯಣ ಭರವಸೆ ನೀಡಿದರು. ಈ ವೇಳೆ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ, ಶಾಸಕ ಎಂ.ಕೃಷ್ಣಪ್ಪ ಹಾಜರಿದ್ದರು.
‘ತುಮಕೂರು ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಯ ವರೆಗೆ ನೈಸ್ ರಸ್ತೆಯಲ್ಲಿ ಡಿಸಿಎಂ ಪರಿಶೀಲನೆ ನಡೆಸಿದ್ದು, ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸಲು ಸೂಚಿಸಿದ್ದಾರೆ. ಅವರ ಸೂಚನೆ ಪಾಲಿಸಲಾಗುವುದು. ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು’
-ಅಶೋಕ್ ಖೇಣಿ ನೈಸ್ ಸಂಸ್ಥೆ ಮುಖ್ಯಸ್ಥ