ಮೋದಿ ಸರಕಾರದ ಅವಧಿಯಲ್ಲಿ 2.65 ಲಕ್ಷ ಕೋಟಿ ರೂ.ಗೆ ತಲುಪಿದ ಭಾರತೀಯ ಆಹಾರ ನಿಗಮದ ಸಾಲ
5 ವರ್ಷಗಳಲ್ಲಿ 3 ಪಟ್ಟು ಹೆಚ್ಚಳ!

ಹೊಸದಿಲ್ಲಿ, ಅ.7: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ನಿರ್ವಹಿಸುವ ಪ್ರಮುಖ ಸಂಸ್ಥೆಯಾದ ಭಾರತೀಯ ಆಹಾರ ನಿಗಮದ ಸಾಲ ನರೇಂದ್ರ ಮೋದಿ ಸರಕಾರದ 5 ವರ್ಷಗಳ ಆಡಳಿತದಲ್ಲಿ 3 ಪಟ್ಟು ಹೆಚ್ಚಾಗಿದೆ ಎಂದು theprint.in ವರದಿ ಮಾಡಿದೆ.
ಯಾವುದೇ ಆದಾಯ ಮೂಲವಿಲ್ಲದ, ಸಾಲ ಬಾಧ್ಯತೆಗಳಿಗಾಗಿ ಸಂಪೂರ್ಣವಾಗಿ ಕೇಂದ್ರ ಸರಕಾರವನ್ನೇ ಅವಲಂಬಿಸಿರುವ ಭಾರತೀಯ ಆಹಾರ ನಿಗಮದ ಸಾಲದ ಮೊತ್ತವು 2019ರ ಮಾರ್ಚ್ ನಲ್ಲಿ 2.65 ಲಕ್ಷ ಕೋಟಿ ರೂ.ಗೆ ತಲುಪಿದೆ. 2014ರಲ್ಲಿ ಈ ಮೊತ್ತವು 91,409 ಕೋಟಿ ರೂ.ಗಳಾಗಿತ್ತು. ಈ ಹೆಚ್ಚಳವು ಸುಮಾರು 190 ಶೇ. ಎಂದು 'ದ ಪ್ರಿಂಟ್' ವರದಿ ತಿಳಿಸಿದೆ.
ಬಜೆಟ್ ಪ್ರಕಾರ ಕೇಂದ್ರ ಸರಕಾರವು ನೀಡಬೇಕಿದ್ದ ಆಹಾರದ ಸಬ್ಸಿಡಿ ಮತ್ತು ಸರಕಾರದ ನೀಡಿದ ಸಬ್ಸಿಡಿಗಳ ನಡುವಿನ ವ್ಯತ್ಯಾಸಗಳನ್ನು ಸರಿದೂಗಿಸಲು ಸರಕಾರವು ಭಾರತೀಯ ಆಹಾರ ನಿಗಮಕ್ಕೆ ರಾಷ್ಟ್ರೀಯ ಕಿರು ಉಳಿತಾಯ ನಿಧಿಯಿಂದ ಸಾಲ ನೀಡಲು ಆರಂಭಿಸಿದ 2016-17ರ ಅವಧಿಯಲ್ಲಿ ಈ ಸಾಲದ ಹೊರೆ ಹೆಚ್ಚಾಗಲು ಆರಂಭಿಸಿತ್ತು ಎಂದು ವರದಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆಗಾಗಿ 'ದ ಪ್ರಿಂಟ್' ಭಾರತೀಯ ಆಹಾರ ನಿಗಮವನ್ನು ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ.