ಊಟದಲ್ಲಿ ಕೂದಲು ಪತ್ತೆಯಾದದ್ದಕ್ಕೆ ಪತ್ನಿಯ ತಲೆಯನ್ನೇ ಬೋಳಿಸಿದ ಪತಿ!
ಢಾಕಾ, ಅ.8: ಪತ್ನಿ ನೀಡಿದ ಬೆಳಗ್ಗಿನ ಉಪಾಹಾರದಲ್ಲಿ ಒಂದು ಕೂದಲು ಪತ್ತೆಯಾಯಿತೆಂದು ಕೋಪಗೊಂಡ ಪತಿ ಆಕೆಯ ತಲೆಯನ್ನೇ ಬೋಳಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಬಾಂಗ್ಲಾದೇಶದ ಜಾಯ್ಪುರ್ಹತ್ ಜಿಲ್ಲೆಯಿಂದ ವರದಿಯಾಗಿದೆ.
ಘಟನೆ ಕುರಿತಂತೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಅವರು ಗ್ರಾಮಕ್ಕೆ ತೆರಳಿ ಆರೋಪಿ ಬಬ್ಲು ಮೊಂಡಾಲ್(35) ಎಂಬಾತನನ್ನು ಬಂಧಿಸಿದ್ದಾರೆ. ಬೆಳಗ್ಗಿನ ಉಪಾಹಾರಕ್ಕಾಗಿ ಆತನ 23 ವರ್ಷ ವಯಸ್ಸಿನ ಪತ್ನಿ ಆತನಿಗೆ ಅನ್ನ ಹಾಗೂ ಹಾಲು ನೀಡಿದ್ದಳು. ಅದರಲ್ಲಿ ಕೂದಲು ಕಂಡ ಕೂಡಲೇ ಆತ ಬ್ಲೇಡ್ ತೆಗೆದುಕೊಂಡು ಆಕೆಯ ತಲೆ ಬೋಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ದೇಶಪೂರ್ವಕವಾಗಿ ನೋವುಂಟು ಮಾಡಿದ ಆರೋಪ ಆತನ ಮೇಲೆ ಹೊರಿಸಲಾಗಿದ್ದು, ಇಂತಹ ಅಪರಾಧವೆಸಗಿದವರಿಗೆ ಬಾಂಗ್ಲಾದೇಶದ ಕಾನೂನಿನಂತೆ 14 ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
Next Story