ಸಾರ್ವಜನಿಕರ ದೂರುಗಳಿಗೆ ಪೊಲೀಸ್ ಠಾಣಾ ವ್ಯಾಪ್ತಿ ಕೇಳದೆ ಎಫ್ಐಆರ್ ದಾಖಲಿಸಿ: ಹೈಕೋರ್ಟ್
ಬೆಂಗಳೂರು, ಅ.8: ಸಾರ್ವಜನಿಕರು ನೀಡುವ ದೂರುಗಳನ್ನು ಆಧರಿಸಿ ಎಫ್ಐಆರ್ ದಾಖಲಿಸುವಾಗ ಪೊಲೀಸ್ ಠಾಣಾ ವ್ಯಾಪ್ತಿ ಕೇಳದಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಿ, ಒಂದು ತಿಂಗಳಲ್ಲಿ ಆದೇಶ ಹೊರಡಿಸುವಂತೆ ಪೊಲೀಸ್ ಇಲಾಖೆಗೆ ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ವಕೀಲ ಎಸ್.ಉಮಾಪತಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾಯಮುರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿತು.
ಸಾರ್ವಜನಿಕರು ದೂರು ದಾಖಲಿಸಲು ಬಂದಾಗ ಠಾಣಾ ವ್ಯಾಪ್ತಿ ಕೇಳದಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಅಧಿಸೂಚನೆ ಮೂಲಕ ನಿರ್ದೇಶಿಸಬೇಕು. ಈ ಬಗ್ಗೆ ಸಾರ್ವಜನಿಕರು ಹಾಗೂ ಪೊಲೀಸರಲ್ಲಿ ವ್ಯಾಪಕ ತಿಳಿವಳಿಕೆ ಮೂಡಿಸಬೇಕು. ಠಾಣಾ ವ್ಯಾಪ್ತಿ ನೆಪ ಹೇಳಿ ಎಫ್ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈ ಬಗ್ಗೆ ತಿಂಗಳಲ್ಲಿ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಎಫ್ಐಆರ್ ದಾಖಲಿಸಿಕೊಳ್ಳುವ ಸಂಬಂಧ ಸುಪ್ರೀಂಕೋರ್ಟ್ ಹಾಗೂ ದೇಶದ ಇತರ ಹೈಕೋರ್ಟ್ಗಳ ತೀರ್ಪುಗಳು ಹಾಗೂ ಕೇಂದ್ರ ಸರಕಾರದ ಸುತ್ತೋಲೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ರಾಜ್ಯ ಗೃಹ ಇಲಾಖೆ ನಿರ್ಲಕ್ಷ ವಹಿಸುತ್ತಿದೆ. ಎಫ್ಐಆರ್ಗಳನ್ನು ದಾಖಲಿಸಿಕೊಳ್ಳುವ ವೇಳೆ ಪೊಲೀಸ್ ಠಾಣಾ ವ್ಯಾಪ್ತಿ ಕೇಳದಂತೆ ಸುಪ್ರೀಂಕೋರ್ಟ್ ನಿರ್ದೇಶನವಿದ್ದು, ಕೇಂದ್ರ ಸರಕಾರ ಸಹ ಈ ಬಗ್ಗೆ ಹಲವು ಬಾರಿ ಸುತ್ತೋಲೆ ಹೊರಡಿಸಿದೆ. ಆದರೂ ರಾಜ್ಯದಲ್ಲಿ ಅದನ್ನು ಜಾರಿಗೆ ತರಲಾಗಿಲ್ಲ ಎಂದು ದೂರಲಾಗಿತ್ತು.
ಅರ್ಜಿದಾರರ ಮನವಿಯಲ್ಲಿ ಏನಿದೆ: ಪೊಲೀಸ್ ಠಾಣಾ ವ್ಯಾಪ್ತಿ ನೋಡದೇ ಎಫ್ಐಆರ್ ದಾಖಲಿಸಿಕೊಳ್ಳುವ ಸಂಬಂಧ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನದ ಪ್ರಕಾರ ಹಿಂದಿನ ಕಾಂಗ್ರೆಸ್ ಅವಧಿಯಲ್ಲಿ 2014ರ ನ.14ರಂದು ಬೆಂಗಳೂರಿನಲ್ಲಿ ಎಫ್ಐಆರ್ ಕೇಂದ್ರ ಆರಂಭಿಸಲಾಗಿತ್ತು. ಅದನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ಎಫ್ಐಆರ್ ಕೇಂದ್ರಗಳನ್ನು ಮತ್ತೆ ಆರಂಭಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಹಾಗೂ ಠಾಣಾ ವ್ಯಾಪ್ತಿ ನೋಡದೆ ಎಫ್ಐಆರ್ ದಾಖಲಿಸಿಕೊಳ್ಳಲು ರಾಜ್ಯದ ಎಲ್ಲ ಠಾಣೆಗಳಿಗೆ ಸುತ್ತೋಲೆ ಹೊರಡಿಸಲು ಪೊಲೀಸ್ ಮಹಾ ನಿರ್ದೇಶಕರಿಗೆ ನಿರ್ದೇಶಿಸೇಕೆಂದು ಅರ್ಜಿದಾರರು ಕೋರಿದ್ದಾರೆ.