ದುಷ್ಕರ್ಮಿಯ ಕಿತಾಪತಿಯಿಂದ ಹೊತ್ತಿ ಉರಿದ ಲೋಕಲ್ ರೈಲಿನ ಬೋಗಿ!

ಸಾಂದರ್ಭಿಕ ಚಿತ್ರ
ಮುಂಬೈ,ಅ.9: ಮೇಲ್ಭಾಗದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳನ್ನು ಸಂಪರ್ಕಿಸುವ ಲೋಕಲ್ ರೈಲಿನ ಪ್ಯಾಂಟೊಗ್ರಾಫ್ನ ಮೇಲೆ ದುಷ್ಕರ್ಮಿಯೋರ್ವ ಬ್ಯಾಗ್ನ್ನು ಎಸೆದ ಪರಿಣಾಮ ಬುಧವಾರ ಮುಂಬೈನ ಹಾರ್ಬರ್ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅರ್ಧ ಗಂಟೆ ಕಾಲ ವ್ಯತ್ಯಯವುಂಟಾಗಿತ್ತು.
ನವಿಮುಂಬೈನ ವಾಶಿ ರೈಲು ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಪನ್ವೇಲ್ಗೆ ತೆರಳುತ್ತಿದ್ದ ಲೋಕಲ್ ರೈಲು ಈ ಘಟನೆಯಿಂದಾಗಿ 12 ನಿಮಿಷಕ್ಕೂ ಅಧಿಕ ವಿಳಂಬವಾಗಿ ಚಲಿಸಿದೆ. ತಕ್ಷಣ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದ್ದು,ಅಗ್ನಿಶಾಮಕ ದಳವು ಬೋಗಿಗೆ ಹತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಹಾನಿಗೀಡಾದ ಬೋಗಿಯನ್ನು ಕಳಚಿ ಸುರಕ್ಷತಾ ಕಾರಣಗಳಿಗಾಗಿ ಕಾರ್ ಶೆಡ್ಗೆ ಕಳುಹಿಸಲಾಗಿದೆ ಎಂದು ಮಧ್ಯ ರೈಲ್ವೆಯ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಕೆ.ಜೈನ್ ಅವರು ತಿಳಿಸಿದರು.
ತನ್ಮಧ್ಯೆ,ರೈಲುಗಳಿಂದ ವಸ್ತುಗಳನ್ನು ಎಸೆಯದಂತೆ ಮಧ್ಯರೈಲ್ವೆಯು ಟ್ವೀಟೊಂದರಲ್ಲಿ ಪ್ರಯಾಣಿಕರನ್ನು ಕೋರಿಕೊಂಡಿದೆ.
ರೈಲು ಸಂಚಾರದಲ್ಲಿ ವಿಳಂಬದಿಂದಾಗಿ ಹೆಚ್ಚಿನ ಪ್ರಯಾಣಿಕರು ಸಮೀಪದ ವಾಶಿ ಡಿಪೋದಿಂದ ಬಸ್ಗಳಲ್ಲಿ ಪ್ರಯಾಣ ಮುಂದುವರಿಸಿದರೆ ಕೆಲವರು ರೈಲು ಸೇವೆ ಪುನರಾರಂಭಗೊಳ್ಳುವವರೆಗೆ ಕಾದು ನಿಂತಿದ್ದರು.