ನೆರೆ ಪರಿಹಾರ ಪಡೆಯಲು ಅಧಿಕೃತ ದಾಖಲೆ ಕಡ್ಡಾಯವಲ್ಲ: ಸಚಿವ ಆರ್.ಅಶೋಕ್
ಬೆಂಗಳೂರು, ಅ.10: ನೆರೆ ಹಾವಳಿಯಿಂದಾಗಿ ಮನೆ ಕಳೆದುಕೊಂಡಿರುವವರು ನೆರೆ ಪರಿಹಾರ ಪಡೆಯಲು ಅಧಿಕೃತ ದಾಖಲೆಗಳು ಕಡ್ಡಾಯವಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟ ಪಡಿಸಿದ್ದಾರೆ.
ಗುರುವಾರ ವಿಧಾನ ಪರಿಷತ್ನಲ್ಲಿ ನಿಯಮ 68ರಡಿಯಲ್ಲಿ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನೆರೆ ಹಾವಳಿಯಿಂದಾಗಿ ಲಕ್ಷಾಂತರ ಮನೆಗಳು ನಾಶವಾಗಿ, ಜನರು ಬೀದಿಯಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕೃತ ದಾಖಲೆಗಳು ಕೇಳುವುದು ಸರಿಯಲ್ಲ. ಹಾಗೂ ಹಲವು ಮಂದಿ ತಮ್ಮ ಮನೆಗಳಿಗೆ ಯಾವುದೇ ದಾಖಲೆ ಮಾಡಿಸಿರುವುದಿಲ್ಲ. ಹೀಗಾಗಿ ಮನೆ ಕಳೆದುಕೊಂಡ ಎಲ್ಲರಿಗೂ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.
ಈ ಹಿಂದೆ ಶೇ.25ರಿಂದ 75ರಷ್ಟು ಹಾನಿಗೊಳಗಾದ ಮನೆಗಳಿಗೆ ಒಂದು ಲಕ್ಷ ರೂ.ಪರಿಹಾರವೆಂದು ಘೋಷಿಸಲಾಗಿತ್ತು. ಆದರೆ, ಹಾನಿಗೊಳಗಾದ ಮನೆಗಳು ಯಾವಾಗ ಬೇಕಾದರು ಬೀಳುವ ಅಪಾಯವಿದೆ. ಹೀಗಾಗಿ ಶೇ.25ರಿಂದ ಮೇಲ್ಪಟ್ಟು ಹಾನಿಗೊಳಗಾದ ಎಲ್ಲ ಮನೆಗಳಿಗೂ 5ಲಕ್ಷ ರೂ.ಪರಿಹಾರ ಒದಗಿಸಲು ನಿನ್ನೆ(ಬುಧವಾರ) ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ವೇಳೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಸುಮಾರು 118 ವರ್ಷಗಳ ನಂತರ ಕಳೆದ ಆಗಸ್ಟ್ನಲ್ಲಿ ಜಲಪ್ರವಾಹ ಉಂಟಾಗಿ, ಕರ್ನಾಟಕದ 22 ಜಿಲ್ಲೆಗಳ 103 ಕ್ಕೂ ಹೆಚ್ಚು ತಾಲೂಕುಗಳು ಪ್ರವಾಹದಲ್ಲಿ ಮುಳುಗಿವೆ. ಲಕ್ಷಾಂತರ ಮಂದಿ ದಿನ ಬೆಳಗಾಗುವಷ್ಟರಲ್ಲಿ ಬೀದಿಗೆ ಬಿದ್ದಿದ್ದಾರೆ. ಹೀಗಾಗಿ ನೆರೆ ಪರಿಹಾರದಲ್ಲಿ ಯಾವುದೇ ರಾಜಕೀಯ ಮಾಡದೆ, ನಿರಾಶ್ರಿತರ ನೆರವಿಗೆ ಧಾವಿಸಬೇಕಾದದ್ದು ನಮ್ಮ ಜವಾಬ್ದಾರಿ ಎಂದರು.
ನೆರೆ ಹಾವಳಿಯಿಂದಾಗಿ ಒಂದು ಕಡೆ ಮನೆ ಕಳೆದುಕೊಂಡ ಲಕ್ಷಾಂತರ ಜನ ಗಂಜಿ ಕೇಂದ್ರದಲ್ಲಿ ವಾಸವಾಗಿದ್ದರೆ, ಮತ್ತೊಂದೆಡೆ ಸುಮಾರು 25ಲಕ್ಷಕ್ಕೂ ಹೆಚ್ಚು ಕೃಷಿ ಭೂಮಿ ಸರ್ವನಾಶವಾಗಿದೆ. ಈ ಕೃಷಿ ಬೆಳೆಗಳ ನಾಶಕ್ಕೆ ವೈಜ್ಞಾನಿಕವಾದಂತಹ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಒತ್ತಾಯಿಸಿದರು.
ನೆರೆ ಪರಿಹಾರದಲ್ಲಿ ರಾಜಕೀಯ ಸಲ್ಲ
ವಿಧಾನಪರಿಷತ್ನಲ್ಲಿ ಕಲಂ 68ರಡಿಯಲ್ಲಿ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಚರ್ಚೆಯ ವೇಳೆ ಸಚಿವ ಆರ್.ಅಶೋಕ್ ಶೇ.25ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾದ ಮನೆಗಳಿಗೆ 5ಲಕ್ಷ ರೂ.ನೀಡಲಾಗುವುದು ಎಂದರು. ಇದಕ್ಕೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, 5 ಲಕ್ಷ ರೂ.ಗೆ ನಿಲ್ಲದೆ, ಈ ಮೊತ್ತವನ್ನು ಹೆಚ್ಚಿಸಿ ಅಂದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್.ಅಶೋಕ್, ಕಾಂಗ್ರೆಸ್ ದೇಶದಲ್ಲಿ 60ವರ್ಷ ಆಡಳಿತ ನಡೆಸಿದೆ. ನಾವು ಇತ್ತೀಚೆಗಷ್ಟೆ ಆಡಳಿತ ನಡೆಸುತ್ತಿದ್ದೇವೆ ಎಂದರು.
ಸಚಿವ ಆರ್.ಅಶೋಕ್ರ ಈ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ನೆರೆ ಪರಿಹಾರದ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ಆಗ್ರಹಿಸಿದರು.
ಮಾಜಿ ಸಚಿವೆ ಜಯಮಾಲಾ, 'ನೆರೆ ಹಾವಳಿಯಿಂದ ಜನತೆ ತತ್ತರಿಸುತ್ತಿದ್ದಾರೆ. ಇವರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಪಕ್ಷಭೇದ ಮರೆತು ಚರ್ಚೆಯಾಗಬೇಕೆ ಹೊರತು, ರಾಜಕೀಯವಲ್ಲ ಎಂದರು. ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ದೇಶಕ್ಕೆ ಸ್ವಾತಂತ್ರ ಬಂದಾಗ ದೇಶದಲ್ಲಿ ಕೇವಲ ಮೂರು ವಿಮಾನವಿತ್ತು. ಶೇ.75ಕ್ಕೂ ಹೆಚ್ಚು ಅನಕ್ಷರಸ್ಥರಿದ್ದರು, ಶೇ.70 ಜನತೆಗೆ ಮನೆ ಇರಲಿಲ್ಲ. ಕೇವಲ ಒಂದು ಹೊತ್ತಿನ ಊಟವಿತ್ತು. ಇದೆಲ್ಲವು ನಮ್ಮ ಆಡಳಿತದಲ್ಲಿ ಬದಲಾವಣೆಯಾಗಿದೆ ಎಂದರು.
ಇದಕ್ಕೆ ಬಿಜೆಪಿ ಸದಸ್ಯ ರವಿಕುಮಾರ್, ಇಷ್ಟು ಮಾಡಿರುವ ನಿಮ್ಮನ್ನು ಜನತೆ ಯಾಕೆ ಮನೆಗೆ ಕಳುಹಿಸಿದರು ಎಂದರು. ಇದರಿಂದ ಗದ್ದಲ ಉಂಟಾಯಿತು. ಈ ವೇಳೆ ಸಭಾಪತಿ ಮಧ್ಯೆಪ್ರವೇಶಿಸಿ, ಗದ್ದಲ ನಿಲ್ಲಿಸುವಂತೆ ಸೂಚಿಸಿ, ನೆರೆಪರಿಹಾರದ ಚರ್ಚೆಗೆ ಅವಕಾಶ ಮಾಡಿಕೊಟ್ಟರು.