ಮಂಗಳೂರು ಮನಪಾ: ಚುನಾಯಿತ ಆಡಳಿತ ಮಂಡಳಿ ಶೀಘ್ರವೇ ಅಸ್ತಿತ್ವಕ್ಕೆ ಬರಲಿ- ಐವಾನ್ ಡಿಸೋಜ ಒತ್ತಾಯ
ಬೆಂಗಳೂರು, ಅ.10: ಮಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಆಡಳಿತ ಮಂಡಳಿ ಶೀಘ್ರವೇ ಅಸ್ತಿತ್ವಕ್ಕೆ ಬಂದು, ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಚಾಲನೆ ನೀಡಬೇಕೆಂದು ವಿಧಾನಪರಿಷತ್ನ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜ ಸರಕಾರವನ್ನು ಒತ್ತಾಯಿಸಿದ್ದಾರೆ.
ಗುರುವಾರ ನಿಯಮ 330ಎ ವಿಶೇಷ ಪ್ರಸ್ತಾವದಡಿಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಅವರು, ಮಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಆಡಳಿತ ಮಂಡಳಿಯ ಅಧಿಕಾರ ಕಳೆದ ಮಾರ್ಚ್ 12ಕ್ಕೆ ಮುಕ್ತಾಯಗೊಂಡಿದೆ. ಅಲ್ಲಿಂದಾಚೆಗೆ ಆಡಳಿತ ಅಧಿಕಾರಿ ನೇಮಕಗೊಂಡು 7ತಿಂಗಳು ಕಳೆದಿದ್ದು, ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದರು.
ಜಿಲ್ಲೆಯಲ್ಲಿ ಯಾವುದೇ ಹೊಸ ಯೋಜನೆಗಳು ಕಾರ್ಯಗತಗೊಂಡಿರುವುದಿಲ್ಲ. ತೆರಿಗೆ ವಸೂಲಾತಿ ಕುಂಠಿತಗೊಂಡಿದೆ. ಸ್ಮಾರ್ಟ್ ಸಿಟಿ ಅಭಿವೃದ್ಧಿ ಸಂಪೂರ್ಣ ನಿರ್ಲಕ್ಷಕ್ಕೊಳಗಾಗಿದ್ದು, ನಗರವು ಅಭಿವೃದ್ಧಿಯಾಗದೆ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದು ಅವರು ವಿಷಾದಿಸಿದರು.
ಹೈಕೋರ್ಟ್ ಅ.31, 2019ರೊಳಗೆ ಮಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ನ,15, 2019ರೊಳಗೆ ಫಲಿತಾಂಶ ಪ್ರಕಟಸಬೇಕು ಹಾಗೂ ಚುನಾಯಿತ ಆಡಳಿತ ಮಂಡಳಿ ಕೂಡಲೇ ಅಸ್ತಿತ್ವಕ್ಕೆ ಬರಬೇಕೆಂದು ನಿರ್ದೇಶನ ನೀಡಿದೆ. ಆದರೂ ಚುನಾವಣಾ ಆಯೋಗ ಈವರೆಗೂ ಚುನಾವಣೆ ನಡೆಸದೆ ನ್ಯಾಯಾಂಗದ ಆದೇಶವನ್ನು ಪಾಲಿಸುತ್ತಿಲ್ಲ. ಹೀಗಾಗಿ ರಾಜ್ಯ ಸರಕಾರ ಈ ಬಗ್ಗೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.