ಬಾಹ್ಯ ಗ್ರಹಗಳಿಗೆ ಮಾನವರು ವಲಸೆ ಹೋಗುವುದಿಲ್ಲ: ನೊಬೆಲ್ ವಿಜೇತ ವಿಜ್ಞಾನಿ ಮೈಕಲ್ ಮೇಯರ್
ಮ್ಯಾಡ್ರಿಡ್ (ಸ್ಪೇನ್), ಅ. 10: ಭೂಮಿಯ ಸೌರವ್ಯೂಹದ ಹೊರಗಿನ ಗ್ರಹವೊಂದಕ್ಕೆ ಮಾನವರು ಯಾವತ್ತೂ ವಲಸೆ ಹೋಗುವುದಿಲ್ಲ, ಯಾಕೆಂದರೆ ಅಲ್ಲಿಗೆ ಹೋಗಲು ಅತ್ಯಂತ ಸುದೀರ್ಘ ಅವಧಿ ಬೇಕಾಗುತ್ತದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಸ್ವಿಝರ್ಲ್ಯಾಂಡ್ ವಿಜ್ಞಾನಿ ಮೈಕಲ್ ಮೇಯರ್ ಬುಧವಾರ ಹೇಳಿದ್ದಾರೆ.
ಸೌರವ್ಯೂಹದ ಹೊರಗಿನ ಗ್ರಹಗಳನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನು ಕಂಡುಹಿಡಿದಿರುವುದಕ್ಕಾಗಿ ಮೇಯರ್ ಮತ್ತು ಅವರ ಸಹೋದ್ಯೋಗಿ ಡಿಡಿಯರ್ ಕ್ವೆಲೋಝ್ಗೆ ಮಂಗಳವಾರ ಭೌತಶಾಸ್ತ್ರಕ್ಕಾಗಿನ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.
‘‘ನಾವು ಸೌರವ್ಯೂಹದ ಹೊರಗಿನ ಗ್ರಹಗಳ ಬಗ್ಗೆ ಮಾತನಾಡುತ್ತೇವೆ. ಆದರೆ, ಒಂದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು- ನಾವು ಅಲ್ಲಿಗೆ ಹೋಗುವುದಿಲ್ಲ’’ ಎಂದು ಮ್ಯಾಡ್ರಿಡ್ನಲ್ಲಿ ನಡೆದ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಏಜನ್ಸಿ ಫ್ರಾನ್ಸ್ ಪ್ರೆಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.
‘‘ನಮ್ಮ ಅತ್ಯಂತ ಹತ್ತಿರದ ಬಾಹ್ಯ ಗ್ರಹಕ್ಕೆ ಹೋಗಬೇಕಾದರೂ, ಇಂದು ಲಭ್ಯವಿರುವ ತಂತ್ರಜ್ಞಾನದ ಪ್ರಕಾರ ನೂರಾರು ಕೋಟಿ ದಿನಗಳು ಬೇಕಾಗುತ್ತದೆ’’ ಎಂದರು.