ಮಂಗಳೂರು: ಅನಧಿಕೃತ ನೀರಿನ ಸಂಪರ್ಕ ವಿರುದ್ಧ ಕ್ರಮ

ಮಂಗಳೂರು, ಅ.11: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಂಪರ್ಕಗಳಿಂದ ಸುಮಾರು 35 ಕೋಟಿ ರೂ. ಸಂಗ್ರಹವಾಗಬೇಕಿದೆ. ಇದರಲ್ಲಿ 11 ಕೋಟಿ ರೂ. ಮಾತ್ರ ವಸೂಲಿ ಮಾಡಲಾಗಿದೆ. 16 ಕೋಟಿ ರು. ಹಳೆ ಬಾಕಿ ಇದೆ. ನೀರಿನ ಬಿಲ್‌ಗಳ ತಕರಾರಿಗೆ ಸಂಬಂಧಿಸಿ ಅ.14ರಂದು ನೀರಿನ ಅದಾಲತ್ ನಡೆಸಲಾಗುವುದು ಎಂದು ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.
ಮಳೆಗಾಲದಲ್ಲಿ ಡೆಂಗ್ ರೋಗದ ಕಾರ್ಯಾಚರಣೆಗೆ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕಗೊಂಡ ಕಾರಣ ನೀರಿನ ಬಿಲ್ ನೀಡಿಕೆಯಲ್ಲಿ ವಿಳಂಬ ಆಗಿದೆ. ಅನಧಿಕೃತ ನೀರಿನ ಸಂಪರ್ಕ ಹೊಂದಿರುವವರು ಅದನ್ನು ಸಕ್ರಮಗೊಳಿಸಬೇಕು. ಇಲ್ಲವೇ ಸಂಪರ್ಕವನ್ನು ಕಿತ್ತು ಹಾಕಬೇಕು. ತಪ್ಪಿದರೆ, ಅಂತಹ ನೀರಿನ ಸಂಪರ್ಕ ವಿರುದ್ಧ ಪಾಲಿಕೆ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳಲಿದೆ ಎಂದು ಶಾನಾಡಿ ಹೇಳಿದರು.
ಆನ್‌ಲೈನ್ ಪಾವತಿಯೂ ಲಭ್ಯ
ಈಗಾಗಲೇ ನೀರಿನ ಬಿಲ್ ಆನ್‌ಲೈನ್ ಪಾವತಿಗೆ ವ್ಯವಸ್ಥೆ ಮಾಡಲಾಗಿದ್ದು, ಚಾಲನೆಯಲ್ಲಿದೆ. ಮಂಗಳೂರು ಮಹಾನಗರ ಪಾಲಿಕೆಯ ವೆಬ್‌ಸೈಟ್ ಮೂಲಕವೂ ನೀರಿನ ಶುಲ್ಕವನ್ನು ಪಾವತಿಸಬುದಾಗಿದೆ ಎಂದು ಅವರು ಹೇಳಿದರು.
ಒಳಚರಂಡಿ ನೀರು ಮಳೆ ನೀರಿನ ಚರಂಡಿಗೆ ಬಿಡದಿರಿ
ನಗರ ಪಾಲಿಕೆ ವ್ಯಾಪ್ತಿಯ ಬೃಹತ್ ವಸತು ಸಮುಚ್ಛಯಗಳಲ್ಲಿ ಒಳಚರಂಡಿ ನೀರನ್ನು ನೇರವಾಗಿ ರಸ್ತೆ ಬದಿ ಮಳೆ ನೀರು ಚರಂಡಿಗೆ ಹರಿಸಲಾಗುತ್ತಿದೆ. ಅಲ್ಲದೆ ವಸತಿ ಸಮುಚ್ಛಯಗಳು ಮಳೆ ನೀರನ್ನು ಕೂಡ ಒಳಚರಂಡಿಗೆ ಬಿಡುತ್ತಿವೆ. ಇದರಿಂದ ಒಳಚರಂಡಿ ಭರ್ತಿಯಾಗಿ ಉಕ್ಕಿ ಹರಿಯುವಂತಾಗಿದೆ. ಪಾಲಿಕೆಯ ಒಳಚರಂಡಿ ಜಾಲಕ್ಕೆ ಹೊಟೇಲ್, ಪಿಜಿ, ಛತ್ರಗಳು, ಹಳಸಿದ, ಮಿಕ್ಕುಳಿದ ಆಹಾರ ಪದಾರ್ಥಗಳು, ಜಿಡ್ಡಿನಂತಹ ವಸ್ತುಗಳನ್ನು ಒಳಚರಂಡಿಗೆ ಹಾಕಲಾಗುತ್ತಿದೆ. ಈ ತ್ಯಾಜ್ಯಗಳನ್ನು ತಮ್ಮಲ್ಲೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳದಿದ್ದರೆ, ಪಾಲಿಕೆಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಎಚ್ಚರಿಕೆ ನೀಡಿದರು.
ಹಳೆ ಒಳಚರಂಡಿ ಜಾಲವನ್ನು ಹೊಸ ಒಳಚರಂಡಿ ಸಂಪರ್ಕಕ್ಕೆ ಜೋಡಿಸುವ ಕಾರ್ಯಕ್ಕೆ ಟೆಂಡರ್ ಕರೆಯಲಾಗಿದೆ. ಟೆಂಡರ್ ಕರೆದು ಏಳು ತಿಂಗಳು ಕಳೆದರೂ ಕಾಮಗಾರಿ ಆರಂಭಿಸಿಲ್ಲ. ಈ ಬಗ್ಗೆ ಗುತಿತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಕಾಮಗಾರಿ ಕೈಗೊಳ್ಳದಿದ್ದರೆ, ಟೆಂಡರ್ ರದ್ದುಗೊಳಿಸುವ ಎಚ್ಚರಿಕೆಯನ್ನು ನೀಡಲಾಗಿದೆ ಎಂದರು.
ಅನಿವಾರ್ಯವಾಗಿ ರಸ್ತೆ ಅಗೆಯಬೇಕಿದ್ದರೆ ಅನುಮತಿ ಕಡ್ಡಾಯ
ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿಯಾಗಿ ರಸ್ತೆ ತುಂಡರಿಸಿ ಕಾಮಗಾರಿ ನಡೆಸುವ ಸಂದರ್ಭ ಪಾಲಿಕೆಯಿಂದ ಅನುಮತಿ ಪಡೆದು ನಿಗದಿತ ಶುಲ್ಕ ಪಾವತಿಸುವುದು ಕಡ್ಡಾಯ. ಅನಿವಾರ್ಯವಾದರೆ ಮಾತ್ರ ರಸ್ತೆ ಅಗೆಯಬೇಕು. ಅದು ಬಿಟ್ಟು, ಕಂಡಕಂಡಲ್ಲಿ ರಸ್ತೆ ತುಂಡರಿಸಿ ಕಾಮಗಾರಿ ನಡೆಸುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮನಪಾ ಆಯುಕ್ತರು ಎಚ್ಚರಿಕೆ ನೀಡಿದರು.







